ಮುಂಬೈ ದಾಳಿ ತನಿಖೆಗೆ ಸಂಬಂಧಿಸಿದಂತೆ ಇಸ್ಲಾಮಾಬಾದ್ 'ವ್ಯಕ್ತ ಫಲಿತಾಂಶ' ತೋರುವ ತನಕ ಪಾಕಿಸ್ತಾನದೊಂದಿಗೆ ಸಮಗ್ರ ಮಾತುಕತೆ ಸಾಧ್ಯವಿಲ್ಲ ಎಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ." ನವೆಂಬರ್ 26ರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ಕಣ್ಣಿಗೆ ಕಾಣುವ ಫಲಿತಾಂಶವನ್ನು ತೋರಬೇಕು ಮತ್ತು ದಾಳಿಕೋರರನ್ನು ಕಾನೂನಿ ಕಟಕಟೆಗೆ ತರುವಲ್ಲಿ ಪಾಕಿಸ್ತಾನ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ ಎಂಬುದನ್ನು ಅದು ಸಾಬೀತು ಮಾಡಬೇಕು" ಎಂದು ಪ್ರಧಾನಿ ಸಿಂಗ್ ನುಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪದ್ಮಪ್ರಶಸ್ತಿ ಪ್ರಧಾನ ಸಮಾರಂಭದ ಪಾರ್ಶ್ವದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಪಾಕಿಸ್ತಾನಿ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರು ಸಮಗ್ರ ಮಾತುಕತೆಯನ್ನು ಸದ್ಯವೇ ಮುಂದುವರಿಸುವ ಅವಶ್ಯಕತೆ ಇದೆ ಎಂಬುದಾಗಿ ನೀಡಿರುವ ಹೇಳಿಕೆಯ ಕುರಿತಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಿದ್ದ ಪ್ರಧಾನಿ, ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಉಗ್ರವಾದವನ್ನು ತೊಡೆದು ಹಾಕುವಲ್ಲಿ ತನ್ನ ನಿಷ್ಠೆ ಹಾಗೂ ನಿರ್ಧಾರವನ್ನು ಇಸ್ಲಾಮಾಬಾದ್ ನವದೆಹಲಿಗೆ ಮನವರಿಕೆ ಮಾಡಬೇಕಿದೆ ಎಂದು ಪ್ರಧಾನಿ ನುಡಿದರು.ಲಾಹೋರ್ ದಾಳಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಭಾರತ ಮತ್ತು ಪಾಕಿಸ್ತಾನವು ಜಂಟಿಯಾಗಿ ಭಯೋತ್ಪಾದನೆಯ ಪಿಡುಗನ್ನು ಎದುರಿಸಬೇಕಾಗಿದೆ ಎಂದು ಹೇಳಿದರಲ್ಲದೆ, ಭಯೋತ್ಪಾದನಾ ಶಕ್ತಿಗಳನ್ನು ಎದುರಿಸಲು ಮತ್ತು ಸೋಲಿಸಲು ಪಾಕಿಸ್ತಾನ ಜನತೆ ಮತ್ತು ಸರ್ಕಾರವು ಧೈರ್ಯ ಮತ್ತು ಸಂಪನ್ಮೂಲವನ್ನು ಹೊಂದಿರಲಿ ಎಂದು ತಾನು ಹಾರೈಸುವುದಾಗಿ ತಿಳಿಸಿದರು.ಲಂಡನ್‌ನಲ್ಲಿ ನಡೆಯಲಿರುವ ಜಿ-20 ಶೃಂಗ ಸಮ್ಮೇಳನದಲ್ಲಿ ಭಾಗವಹಿಸಲಿರುವ ಸಿಂಗ್ ಅವರು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೊಂದಿಗೆ ಗುರುವಾರ ನಡೆಸಲಿರುವ ಮಾತುಕತೆಯಲ್ಲಿ ಭಯೋತ್ಪಾದನೆಯು ಪ್ರಮುಖ ವಿಚಾರವಾಗಲಿದೆ ಎಂದು ನುಡಿದರು. ಸಮ್ಮೇಳನ ಸಂದರ್ಭದಲ್ಲಿ ಸಿಂಗ್ ಅವರು ಒಬಾಮರನ್ನು ಪ್ರಥಮವಾಗಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇದಲ್ಲದೆ, ಭಾರತ ಅಮೆರಿಕ ದ್ವಿಪಕ್ಷೀಯ ವಿಚಾರಗಳು, ಪ್ರಾದೇಶಿಕ ವಿಚಾರಗಳು ಹಾಗೂ ತನ್ನ ನೆರೆಯ ದೇಶಗಳೊಂದಿಗಿನ ಸಂಬಂಧಗಳ ಕುರಿತೂ ಸಹ ಚರ್ಚಿಸಲಾಗುವುದು ಎಂದು ಅವರು ತಿಳಿಸಿದರು. |