ಪಾಕಿಸ್ತಾನವು 'ವಿಶ್ವದ ಭಯೋತ್ಪಾದನೆಯ ಕೇಂದ್ರಬಿಂದು' ಎಂದು ವಿವರಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು, ಉಗ್ರರ ವಿರುದ್ಧ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಲು ಇಸ್ಲಾಮಾಬಾದ್ ವಿಫಲವಾಗಿದೆ ಎಂದು ಬುಧವಾರ ಪ್ರಕಟಗೊಂಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಸಿಂಗ್ ಅವರು, ಪಾಕಿಸ್ತಾನದಲ್ಲಿ ನೆಲೆಸಿರುವ ಉಗ್ರಗಾಮಿ ಸಂಘಟನೆಯನ್ನು ನಿಯಂತ್ರಿಸಲು ಪಾಕಿಸ್ತಾನ ಒಂದೋ 'ಅಮರ್ಥವಾಗಿದೆ' ಇಲ್ಲವೆ 'ಇಚ್ಚೆ ಹೊಂದಿಲ್ಲ' ಎಂದು ಹೇಳಿದ್ದಾರೆ. 170ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಮುಂಬೈದಾಳಿಯು ಲಷ್ಕರೆಯ ದುಷ್ಕೃತ್ಯ ಎಂದು ನವದೆಹಲಿ ಆಪಾದಿಸಿದೆ.ಭಾರತದ ವಿರುದ್ಧ ದಾಳಿಗೆ ತಾನು ಉಡಾವಣಾ ನೆಲೆ ಆಗುವುದಿಲ್ಲ ಎಂಬುದಾಗಿ ಕಳೆದೊಂದು ದಶಕದಿಂದೀಚೆಗೆ ಪಾಕಿಸ್ತಾನ ಹೇಳುತ್ತಲೇ ಬಂದಿದ್ದರೂ, ಭಯೋತ್ಪಾದನೆಯನ್ನು ನಿಯಂತ್ರಿಸಲು ಪ್ರಾಯೋಗಿಕವಾಗಿ ಯಾವುದೇ ಪರಿಣಾಮಕಾರಿ ಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ದೂರಿದರು.ವಿಶ್ವದ ಭಯೋತ್ಪದನಾ ಕೇಂದ್ರವು ಪಾಕಿಸ್ತಾನ ಎಂಬುದು ನಮಗೆಲ್ಲರಿಗೆ ತಿಳಿದಿದೆ ಈ ವಾಸ್ತವವನ್ನು ವಿಶ್ವಸಮುದಾಯ ಅರಿತುಕೊಳ್ಳಬೇಕಿದೆ ಎಂದವರು ನುಡಿದರು. |