ಜೆಡಿಯು ಪಕ್ಷವು ಆರೋಗ್ಯ ಕಾರಣದಿಂದಾಗಿ ಟಿಕೆಟ್ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಚುನಾವಣೆಯಲ್ಲಿ ಸ್ಫರ್ಧಿಸಿಯೇ ಸಿದ್ಧ ಎಂಬ ಹಠಮಾರಿ ಧೋರಣೆ ತಳೆದಿರುವ ಸಮತಾವಾದಿ ಜಾರ್ಜ್ ಫರ್ನಾಂಡಿಸ್ ಅವರು ಬುಧವಾರ ಮುಜಾಫರಾಪುರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ 20 ವರ್ಷಗಳಿಂದ ಒಂದೂ ತಪ್ಪದಂತೆ ನಿರಂತರ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಾ ಬಂದಿರುವ ಶುದ್ಧಚಾರಿತ್ರ್ಯದ ರಾಜಕಾರಣಿ ಎಂಬ ಖ್ಯಾತಿಗೆ ಭಾಜನವಾಗಿರುವ ಹಿರಿಯ ಮುತ್ಸದ್ಧಿ ಜಾರ್ಜ್ ಫರ್ನಾಂಡಿಸ್ ಅವರಿಗೆ, ಅವರು ಪ್ರಸ್ತುತ ಇರುವ ಜೆಡಿಯು ಟಿಕೆಟ್ ನಿರಾಕರಿಸಿದೆ. ಮುಜಾಫರಾಪುರದ ದಂಡಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ ಬಿಪಿನ್ ಕುಮಾರ್ ಅವರಿಗೆ ಎನ್‌ಡಿಎ ಸಂಚಾಲಕ ಫರ್ನಾಂಡಿಸ್ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.ಮಾಜಿ ಕೇಂದ್ರ ಸಚಿವ ದಿಗ್ವಿಜಯ್ ಸಿಂಗ್, ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ, ಮಾಜಿ ಜೆಡಿಯು ಉಪಾಧ್ಯಕ್ಷ ರಾಂಜೀವನ್ ಸಿಂಗ್ ಹಾಗೂ ಮಾಜಿ ರಾಜ್ಯ ಸಚಿವ ಗಣೇಶ್ ಪ್ರಸಾದ್ ಯಾದವ್ ಅವರುಗಳು ನಾಮಪತ್ರ ಸಲ್ಲಿಕೆ ವೇಳೆಗೆ ಫರ್ನಾಂಡಿಸ್ ಅವರೊಂದಿಗಿದ್ದರು.ಫರ್ನಾಂಡಿಸ್ ಅವರು ಮಂಗಳವಾರವಷ್ಟೆ ತಾನು ಸ್ವತಂತ್ರವಾಗಿ ಸ್ಫರ್ಧಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಯಾವ ಪಕ್ಷದ ಟಿಕೆಟ್‌ನಿಂದ ಸ್ಫರ್ಧಿಸುವೆ ಎಂಬುದನ್ನು ತಿಳಿಸಲು ನಿರಾಕರಿಸಿದ್ದರು. ಇದಕ್ಕೆ ವ್ಯತಿರಿಕ್ತ ಎಂಬಂತೆ ಬುಧವಾರ ಸ್ವತಂತ್ರವಾಗಿ ನಾಮಪತ್ರ ಸಲ್ಲಿಸಿದ್ದಾರೆ.ಫರ್ನಾಂಡಿಸ್ ಆರೋಗ್ಯ ವೈಫಲ್ಯದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡಲಾಗುತ್ತಿಲ್ಲ ಎಂಬ ನಿತಿಶ್ ಕುಮಾರ್ ಹಾಗೂ ಶರದ್ ಯಾದವ್ ಹೇಳಿಕೆಯನ್ನು ಅಲ್ಲಗಳೆದ ಅವರು, "ಅವರು ಸುಳ್ಳು ಹೇಳುತ್ತಿದ್ದಾರೆ" ಎಂದು ನುಡಿದರು. ಅಲ್ಲದೆ ಎಲ್ಲವೂ ಜನತಾ ನ್ಯಾಯಾಲಯದಲ್ಲಿ ನಿರ್ಣಯವಾಗಲಿದೆ ಎಂದು ಕಳೆಗುಂದಿದಂತೆ ತೋರುತ್ತಿದ್ದ ಫರ್ನಾಂಡಿಸ್ ನುಡಿದರು.ಫರ್ನಾಂಡಿಸ್ ಅವರು ಪ್ರಥಮ ಬಾರಿಗೆ 1977ರಲ್ಲಿ ಮುಜಾಫರಾಪುರದಿಂದ ಗೆದ್ದು ಬಂದಿದ್ದರು. ಆ ವೇಳೆಗೆ ಅವರು ಬರೋಡ ಡೈನಮೈಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿ ಬಂಧಿಯಾಗಿದ್ದರು. ಜೈಲಿನಿಂದಲೇ ಸ್ಫರ್ಧಿಸಿ ಅವರು ಗೆದ್ದು ಬಂದಿದ್ದರು. |