ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಬಿಜೆಪಿ ನಾಯಕ ವರುಣ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣವು ಗುರುವಾರ ವಿಚಾರಣೆಗೆ ಬರಲಿದೆ ಎಂದು ಹೇಳಲಾಗಿದೆ.
ವರುಣ್ ಅವರನ್ನು ರಾಜ್ಯ ಸರ್ಕಾರವು ಕಾನೂನು ಬಾಹಿರವಾಗಿ ಬಂಧಿಸಿದೆ ಎಂದು ವರುಣ್ ಪರ ಅರ್ಜಿ ಸಲ್ಲಿಸಿರುವ ಅವರ ವಕೀಲರಾದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮುಕುಲ್ ರೊಹಟಗಿ ಅವರು ಮುಖ್ಯನ್ಯಾಯಾಧೀಶ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠದ ಮುಂದೆ ಅರಿಕೆ ಮಾಡಿದರು.
ವರುಣ್ ಅವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸುವಂತೆ ತಾನು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು. ಒಬ್ಬ ವ್ಯಕ್ತಿ ಕಾಣೆಯಾದಾಗ ಮತ್ತು ಅನ್ಯಾಯದ ಆಟ ನಡೆಯುತ್ತಿದೆ ಎಂಬ ಶಂಕೆ ಇದ್ದಾಗ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗುತ್ತದೆ.
ಚುನಾವಣಾ ಪ್ರಚಾರದ ವೇಳೆ ಮುಸ್ಲಿಂ ವಿರೋಧಿ ಹೇಳಿಕೆಗಳಿಂದ ಕೆಂಗಣ್ಣಿಗೀಡಾಗಿರುವ ವರುಣ್ ವಿರುದ್ಧ ಕೋಮು ಉದ್ವಿಗ್ನ ಸೃಷ್ಟಿ, ಶಾಂತಿ ಭಂಗ ಹಾಗೂ ಸಾರ್ವಜನಿಕ ಆಡಳಿತಕ್ಕೆ ಭಂಗ ಉಂಟು ಮಾಡಿರುವ ಕಾರಣ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾಯ್ದೆಯ ಸೆಕ್ಷನ್ 3(2) ಅನ್ವಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. |