ಬಿಜೆಪಿ ನೇತೃತ್ವದ ಎನ್‌ಡಿಎಯು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸುವ ಕುರಿತು ತನಗೆ ವಿಶ್ವಾಸವಿಲ್ಲ ಎಂಬ ಹೇಳಿಕೆ ನೀಡಿರುವ ಸುಶ್ಮಾ ಸ್ವರಾಜ್ ಭಾರತೀಯ ಜನತಾ ಪಕ್ಷಕ್ಕೆ ಆಘಾತ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, "ಎನ್‌ಡಿಎ ಬಹುಮತ ಗಳಿಸಲಿದೆ ಎಂಬ ಕುರಿತು ತನಗೆ ವಿಶ್ವಾಸವಿಲ್ಲ" ಎಂದು ಹೇಳಿದ್ದರು. ಆದರೆ ಪಕ್ಕನೆ ತನ್ನ ಹೇಳಿಕೆಯನ್ನು ಸರಿಪಡಿಸಿಕೊಂಡ ಅವರು, 545 ಸ್ಥಾನ ಸಾಮರ್ಥ್ಯದ ಲೋಕಸಭೆಯಲ್ಲಿ ಬಹುಪಕ್ಷದ ಮೈತ್ರಿ ಕೂಟವಾದ ಎನ್‌ಡಿಎಯು ಏಕೈಕ ಬೃಹತ್ ಕೂಟವಾಗಿ ಮೂಡಿಬಂದಲ್ಲಿ ಅದು ಚುನಾವಣೋತ್ತರ ಮೈತ್ರಿಯ ಮೂಲಕ ಅಧಿಕಾರಕ್ಕೇರಲಿದೆ ಎಂದವರು ಸಮಜಾಯಿಷಿ ನೀಡಿದರು.ಸುಶ್ಮಾ ಅವರು ಮಧ್ಯಪ್ರದೇಶದ ಬಿಜೆಪಿ ಉಸ್ತುವಾರಿಯಾಗಿದ್ದಾರೆ. ಇಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಅಧಿಕಾರವನ್ನು ಉಳಿಸಿಕೊಂಡಿತ್ತು. ಅಲ್ಲದೆ ರಾಜ್ಯದ 29 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಉದ್ದೇಶ ಹೊಂದಿದೆ.ಆದರೆ, ಸುಶ್ಮಾ ಸ್ವರಾಜ್ ಇಂತಹ ಹೇಳಿಕೆ ನೀಡಲು ಕಾರಣವೇನು ಎಂಬುದನ್ನು ವಿವರಿಸುವ ಸ್ಥಿತಿಯಲ್ಲಿ ಬಿಜೆಪಿ ನಾಯಕರಿಲ್ಲ. ಬಿಜೆಪಿ ವಕ್ತಾರರು ಈ ಸುಶ್ಮಾ ಹೇಳಿಕೆಗೆ ಪ್ರತಿಕ್ರಿಯಿಸಲು ಬಯಸದೆ ತಣ್ಣಗೆ ಜಾರಿಕೊಂಡಿದ್ದಾರೆ.ವಕ್ತಾರರಾದ ಮುಕ್ತಾರ್ ಅಬ್ಬಾಸ್ ನಕ್ವಿ, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವೇಡ್ಕರ್ ಮತ್ತು ಸಿದ್ದಾರ್ಥನಾಥ್ ಸಿಂಗ್ ಅವರುಗಳು ತಾವ್ಯಾಕೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದಕ್ಕೆ ವಿವಿಧ ಕಾರಣಗಳನ್ನು ನೀಡುತ್ತಿದ್ದಾರೆ.ಏತನ್ಮಧ್ಯೆ, ಸುಶ್ಮಾ ಹೇಳಿಕೆಯನ್ನು ಅಪಾರ್ಥಮಾಡಿಕೊಳ್ಳಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಹೇಳಿದ್ದಾರೆ. |