ಶತಾಯ ಗತಾಯ ಪ್ರಧಾನಿ ಹುದ್ದೆ ಏರಬೇಕೆಂಬ ಮಹತ್ವಾಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರು, ಚುನಾವಣೋತ್ತರ ಮೈತ್ರಿಯನ್ನು ಮುಕ್ತವಾಗಿಸುವ ದಿಸೆಯಲ್ಲಿ, ಶುಕ್ರವಾರ ಒರಿಸ್ಸಾದಲ್ಲಿ ನಡೆಯಲಿರುವ ತೃತೀಯ ರಂಗದ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಯುಪಿಎಯ ಪ್ರಮುಖ ಅಂಗಪಕ್ಷವಾಗಿದ್ದ ಎನ್‌ಸಿಪಿಯ ಈ ಕ್ರಮವು ಕಾಂಗ್ರೆಸ್‌ಗೆ ಇನ್ನೊಂದು ಹೊಡೆತ ನೀಡಿದೆ.
ಒರಿಸ್ಸಾದ ಸಮಾವೇಶದಲ್ಲಿ ಭಾಗವಹಿಸುವ ಪವಾರ್ ಅವರ ನಿರ್ಧಾರವನ್ನು ಕಾಂಗ್ರೆಸ್ ನಿರ್ಲಕ್ಷ್ಯಿಸಿದ್ದು, ಎನ್‌ಸಿಪಿ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಒಪ್ಪಂದವು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ ಅಷ್ಟೆ ಎಂದು ಹೇಳಿದೆ.
ಪವಾರ್ ಪ್ರಕಾರ ತೃತೀಯ ರಂಗದ ಸಮಾವೇಶದಲ್ಲಿ ಭಾಗವಹಿಸುವುದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿಗಳಿಗೆ ಹೊರತಾದ ತೃತೀಯ ರಂಗವು ಇತ್ತೀಚೆಗೆ ತುಮಕೂರಿನಲ್ಲಿ ಅನಾವರಣಗೊಂಡಿದ್ದು ಹತ್ತು ಪಕ್ಷಗಳು ಇದರಲ್ಲಿ ಭಾಗವಹಿಸಿದ್ದವು. ಶರದ್ ಇದೇ ಪ್ರಥಮ ಬಾರಿಗೆ ತೃತೀಯ ರಂಗದ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದಾರೆ.
ಒರಿಸ್ಸಾದ ಬಿಜೆಡಿಯೊಂದಿಗೆ ಎನ್‌ಸಿಪಿ ಸೀಟುಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಈ ಕಾರಣಕ್ಕಾಗಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದೆ ಎಂದು ಪವಾರ್ ಹೇಳಿದ್ದಾರೆ. ಎನ್‌ಸಿಪಿಯು ವಿವಿಧ ರಾಜ್ಯಗಳಲ್ಲಿ ವಿವಿಧ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ.
ಈ ಮಧ್ಯೆ, ಎನ್‌ಸಿಪಿ ಜತೆಗಿನ ಮೈತ್ರಿ ಪ್ರಸ್ತುತ ಒರಿಸ್ಸಾಗೆ ಮಾತ್ರ ಸೀಮಿತ ಎಂದು ಸಿಪಿಐ ಮುಖಂಡ ಪ್ರಕಾಶ್ ಕಾರಚ್ ಹೇಳಿದ್ದಾರೆ. |