ವಿಧ್ವಂಸ ಕೃತ್ಯಗಳನ್ನು ನಡೆಸುವ ಉದ್ದೇಶದಿಂದ ತರಬೇತು ಹೊಂದಿರುವ ಸುಮಾರು ಏಳೆಂಟು ಪೈಲಟ್‌ಗಳು ಮತ್ತು ಡಜನ್‌ನಷ್ಟು ಮಹಿಳಾ ಫಿದಾಯಿನ್‌ಗಳು ರಾಷ್ಟ್ರದೊಳಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.
ಮಹಾರಾಷ್ಟ್ರ ಪೊಲೀಸರು ಮತ್ತು ಇತರ ಭದ್ರತಾ ಸಂಸ್ಥೆಗಳಿಂದ ಆರುದಿನಗಳ ಹಿಂದೆ ಈ ಮಾಹಿತಿಗಳು ಬಂದಿದ್ದು, ರಾಷ್ಟ್ರಾದ್ಯಂತ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಪುಷ್ಠಿಗೊಳಿಸಲಾಗಿದೆ. ಮುಂಬೈಯ ತಾಜ್ ಮಹಲ್ ಹೋಟೇಲ್ ಮತ್ತು ಚೆನ್ನೈನ ತಾಜ್ ಪ್ರಾಪರ್ಟಿಗೆ ಇಮೇಲ್ ಬೆದರಿಕೆ ಕಳುಹಿಸಿರುವ ಮೂರು ದಿನಗಳ ಮುಂಚಿತವಾಗಿ ಈ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ಸಂಗ್ರಹಿಸಿವೆ.
ಸುಮಾರು 20 ಮಂದಿಯ ಗುಂಪು ರಾಷ್ಟ್ರವನ್ನು ಪ್ರವೇಶಿಸಿವೆ ಎಂಬ ಕುರಿತು ಎಲ್ಲಾ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದೆ. "ಪಾಕಿಸ್ತಾನಿಗಳಾಗಿರಬಹುದಾದ 20 ಮಂದಿಯ ಗುಂಪೊಂದು ರಾಷ್ಟ್ರದೊಳಗೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಮತ್ತು ವಿಮಾನ ಅಪಹರಣ ಉದ್ದೇಶದಿಂದ ರಾಷ್ಟ್ರವನ್ನು ತಲುಪಿದೆ. ಇವರಲ್ಲಿ ಏಳು ತರಬೇತುಗೊಂಡಿರುವ ಪೈಲಟ್‌ಗಳು ಮತ್ತು 13-14 ಮಹಿಳಾ ಫಿದಾಯಿನ್‌ಗಳು ಸೇರಿದ್ದಾರೆ" ಎಂದು ಮೂಲಗಳು ತಿಳಿಸಿವೆ.
ಇದು ವಾಯುಯಾನ ಸಚಿವಾಲಯವು ಪಡೆದಿರುವ ಅತ್ಯಂತ ಗಂಭೀರವಾದ ಮಾಹಿತಿಗಳಲ್ಲಿ ಒಂದಾಗಿದೆ. 26/11ರ ಮುಂಬೈದಾಳಿ ಬಳಿಕ ಸಚಿವಾಲಯವು ಬೆದರಿಕೆ ಕರೆಗಳನ್ನು ಎದುರಿಸುತ್ತಲೇ ಬಂದಿದ್ದರೂ, ಇದೂ ಇದುವರೆಗಿನ ಬೆದರಿಕೆಗಳಲ್ಲಿ ಅತ್ಯಂತ ಗಂಭೀರವಾದುದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂದೇಶವನ್ನು ವಾಯಯಾನ ಭದ್ರತಾ ಸಂಸ್ಥೆಗೆ ಕಳುಹಿಸಲಾಗಿದ್ದು, ಸಂಸ್ಥೆಯು ಇದನ್ನು ರಾಷ್ಟ್ರಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಿಗೆ ರವಾನಿಸಿದೆ.
ಆಡ್ವಾಣಿ-ಚಿದು ಭೇಟಿ ಸುಮಾರು 20 ವಿವಿಐಪಿಗಳಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗೃಹಸಚಿವ ಪಿ. ಚಿದಂಬರಂ ಅವರು ಬಿಜೆಪಿ ಮುಖ್ಯಸ್ಥ ಎಲ್.ಕೆ. ಆಡ್ವಾಣಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಮುಖಂಡರಾದ ಆಡ್ವಾಣಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರುಗಳು ಉಗ್ರರ ಪಟ್ಟಿಯಲ್ಲಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಅವರ ಪುತ್ರ ರಾಹುಲ್ ಗಾಂಧಿ ಅವರಿಗೂ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರುಗಳಿಗೆ ರಸ್ತೆ ಪ್ರದರ್ಶನ ನಡೆಸದಿರುವಂತೆ ಸೂಚನೆ ನೀಡಲಾಗಿದೆ. |