ಪಿಲಿಭಿತ್ ಜಿಲ್ಲಾ ಜೈಲಿನಿಂದ ಇಟಾ ಜೈಲಿಗೆ ವರ್ಗಾವಣೆ ಕೊಂಡಿರುವ ಬಿಜೆಪಿ ಯುವ ನಾಯಕ ವರುಣ್ ಗಾಂಧಿ, ಜೈಲಿನಲ್ಲಿ ತನ್ನನ್ನು ಅಧಿಕಾರಿಗಳು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ ಮತ್ತು ಇಲ್ಲಿ ಕೊಡುವ ಆಹಾರ ಪ್ರಾಣಿಗಳಿಗೆ ಕೊಡುವ ಆಹಾರಕ್ಕಿಂತಲೂ ಕಳಪೆಯಾಗಿದೆ" ಎಂದು ದೂರಿದ್ದಾರೆನ್ನಲಾಗಿದೆ.
"ನನ್ನನ್ನು ಇಲ್ಲಿ ಜೈಲು ಅಧಿಕಾರಿಗಳು ಕಠಿಣವಾಗಿ ನಡೆಸಿಕೊಳ್ಳುತ್ತಿದ್ದಾರೆ ಮತ್ತು ನಾಯಿಗಳೂ ತಿನ್ನದಂತಹ ಆಹಾರವನ್ನು ನೀಡಲಾಗುತ್ತದೆ" ಎಂದು ವರುಣ್ ಅವರು ತನ್ನನ್ನು ಭೇಟಿಯಾಗಿರುವ ಪಕ್ಷದ ಸ್ಥಳೀಯ ನಾಯಕರೊಂದಿಗೆ ದೂರಿಕೊಂಡಿದ್ದಾರೆ ಎಂದು ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸುರೇಂದ್ರ ಪ್ರಸಾದ್ ಗುಪ್ತಾ ತಿಳಿಸಿದ್ದಾರೆ.
ವರುಣ್ ಅವರನ್ನು ಜೈಲಿನಲ್ಲಿ ಒರಟಾಗಿ ನಡೆಸಿಕೊಳ್ಳುತ್ತಾರೆ ಮತ್ತು ಓರ್ವ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗುತ್ತದೆ ಎಂದು ದೂರಲಾಗಿದೆ.
ಪಿಲಿಭಿತ್ ಕ್ಷೇತ್ರದಲ್ಲಿ ಉದ್ರೇಕಕಾರಿ ಭಾಷಣ ಮಾಡಿರುವ ವರುಣ್ ಅವರ ವಿರುದ್ಧ ಎನ್‌ಎಸ್ಎ ಕಾಯ್ದೆ ಹೇರಿದ್ದು ಬಂಧನದಲ್ಲಿ ಇರಿಸಲಾಗಿದೆ. ಅವರಿಗೆ ಪ್ರಾಣ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರು ಮಂಗಳವಾರ ರಾತ್ರಿ ಪಿಲಿಭಿತ್ ಜೈಲಿನಿಂದ ಇಟಾ ಜೈಲಿಗೆ ವರ್ಗಾಯಿಸಲಾಗಿತ್ತು. |