ತನ್ನನ್ನು ರಾಷ್ಟ್ರೀಯ ಭದ್ರತೆ ಕಾಯ್ದೆಯನ್ವಯ ಬಂಧಿಸಿರುವುದನ್ನು ಪ್ರಶ್ನಿಸಿ ವರುಣ್ ಗಾಂಧಿ ಸಲ್ಲಿಸಿರುವ ಮನವಿಯನ್ವಯ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರ ಹಾಗೂ ಪಿಲಿಭಿತ್ ದಂಡಾಧಿಕಾರಿಯವರಿಗೆ ನೋಟೀಸ್ ನೀಡಿದೆ. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ಎಪ್ರಿಲ್ 13ಕ್ಕೆ ನಿಗದಿ ಮಾಡಿದೆ.ಎನ್ಎಸ್ಎಯಡಿ ಬಂಧಿಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸದೆ ತನ್ನ ಕಕ್ಷಿದಾರರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ವರುಣ್ ವಕೀಲರು ನ್ಯಾಯಾಲಯದ ಮುಂದೆ ಅರಿಕೆ ಮಾಡಿದರು. ಅಲ್ಲದೆ, ವರುಣ್ ಬಂಧನದ ಕುರಿತ ದಾಖಲೆಗಳನ್ನು ರಾಜ್ಯ ಸರ್ಕಾರ ತನಗೆ ಹಸ್ತಾಂತರಿಸಿಲ್ಲ ಎಂದೂ ಅವರು ನುಡಿದರು.ವರುಣ್ ಗಾಂಧಿ ಪಿಲಿಭಿತ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಿದ್ದು, ಅವರು ತನ್ನ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಕೆಲವೇ ದಿನಗಳು ಉಳಿದಿವೆ ಹಾಗೂ ಅವರು ಎಪ್ರಿಲ್ 16 ಅಥವಾ 17ರಂದು ನಾಮಪತ್ರ ಸಲ್ಲಿಸಲಿರುವ ಕಾರಣ ಬಂಧನವನ್ನು ವಜಾಗೊಳಿಸಿ ಅವರನ್ನು ಬಿಡುಗಡೆ ಮಾಡಬೇಕು ಎಂದು ವಕೀಲರು ನ್ಯಾಯಾಲಯವನ್ನು ವಿನಂತಿಸಿದರು." ಮಾಯಾವತಿ ಸರ್ಕಾರ ಎಲ್ಲರನ್ನೂ ಬಂಧನದಲ್ಲಿರಿಸಲು ಬಯಸುತ್ತದೆ. ಈ ಪ್ರತಿಬಂಧಕ ಬಂಧನವು ದುರುದ್ದೇಶಪೂರ್ವಕವಾಗಿದೆ. ವರುಣ್ ತನ್ನ ನಾಮಪತ್ರ ಸಲ್ಲಿಸಿ ಪ್ರಚಾರ ನಡೆಸಬೇಕಿರುವುದರಿಂದ ಅವರಿಗೆ ಕನಿಷ್ಠ ಪಕ್ಷ ಮಧ್ಯಂತರ ಜಾಮೀನನ್ನಾದರೂ ನೀಡಬೇಕು" ಎಂದು ವಕೀಲರು ಕೋರಿದರು. |