ಸಿಖ್ ನರಮೇಧ ಪ್ರಕರಣದಲ್ಲಿ ಸಿಬಿಐ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಶಿರೋಮಣಿ ಅಕಾಲಿ ದಳವು ತೀವ್ರವಾಗಿ ಪ್ರತಿಭಟಿಸಿದೆ.
ಎಐಸಿಸಿ ಮುಖ್ಯ ಕಚೇರಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ನಿವಾಸದ ಎದುರುಗಡೆ ಜಮಾಯಿಸಿದ್ದ ಸಿಖ್ ನಾಯಕರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಈ ಮಧ್ಯೆ ಸಿಬಿಐ ತನ್ನನ್ನು ನಿರ್ದೋಷಿ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿರುವ ಟೈಟ್ಲರ್, "ಕೊನೆಗೂ ಸತ್ಯ ಹೊರಗೆ ಬಂದಿದೆ. ಈ ಹಿಂದೆಯೂ ನನ್ನನ್ನು ನಿರ್ದೋಷಿ ಎನ್ನಲಾಗಿತ್ತು. ಆದರೆ ನನ್ನ ವಿರುದ್ಧ ರಾಜಕೀಯ ಸಂಚು ಹೂಡಲಾಗಿತ್ತು, ನಾನು ಅಮಾಯಕ. ಸತ್ಯ ಹೊರಗೆ ಬಂದಿರುವುದಕ್ಕೆ ನಮಗೆ ಸಂತಸವಾಗಿದೆ" ಎಂದು ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣವನ್ನು ಮಾಧ್ಯಮಗಳೇ ಇನ್ನೂ ಜೀವಂತವಾಗಿರಿಸಿರುವುದು ಎಂದು ಮಾಧ್ಯಮಗಳನ್ನೂ ಅವರು ತರಾಟೆಗೆ ತೆಗೆದುಕೊಂಡರು.
ಪ್ರಕರಣದಲ್ಲಿ ಟೈಟ್ಲರ್ ತಪ್ಪಿತಸ್ಥರಲ್ಲ ಎಂದು ಹೇಳಿರುವ ಸಿಬಿಐ ಈ ಪ್ರಕರಣವನ್ನು ಮುಚ್ಚುವುದಾಗಿ ಗುರುವಾರ ದೆಹಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು. ಸಿಬಿಐ 2007ರಲ್ಲೂ ಸಹ ಪ್ರಕರಣವನ್ನು ಮುಚ್ಚಲು ನ್ಯಾಯಾಲಯದ ಅನುಮತಿ ಕೋರಿತ್ತು. ಟೈಟ್ಲರ್ ವಿರುದ್ಧ ಸಾಕಷ್ಟು ಪುರಾವೆ ಇಲ್ಲ ಎಂದು ಸಿಬಿಐ ಹೇಳಿತ್ತಾದರೂ ನ್ಯಾಯಾಲಯ ಸಿಬಿಐ ಮನವಿಯನ್ನು ತಳ್ಳಿಹಾಕಿತ್ತು.
ಮಾಜಿ ಪ್ರಧಾನಿ ಇಂದಿರಾಗಾಂಧಿ ಹತ್ಯೆಯ ಬಳಿಕ ಭುಗಿಲೆದ್ದಿದ್ದ ಹಿಂಸಾಚಾರದಲ್ಲಿ ಟೈಟ್ಲರ್ ವಿರುದ್ಧ ದೂರು ದಾಖಲಿಸಲಾಗಿತ್ತು. 1984ರಲ್ಲಿ ಗುರುದ್ವಾರ ಪುಲ್ಬಂಗಶ್‌ಗೆ ಬೆಂಕಿ ಹಚ್ಚಿದ್ದು, ಈ ವೇಳೆ ಮೂವರು ಸಾವನ್ನಪ್ಪಿದ್ದು, ಈ ಗಲಭೆಯನ್ನು ಟೈಟ್ಲರ್ ನೇತೃತ್ವದಲ್ಲಿ ನಡೆಸಲಾಗಿದೆ ಎಂದು ದೂರಲಾಗಿತ್ತು. |