ಬಿಜೆಪಿಯು ರಾಮನವಮಿಯ ದಿನವಾದ ಶುಕ್ರವಾರದಂದು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಬಡತನರೇಖೆಗಿಂತ ಕೆಳಗಿನ ಮಂದಿಗೆ ಕೆಜಿಯೊಂದರ ಎರಡು ರೂಪಾಯಿಗೆ ತಿಂಗಳೊಂದರ 35 ಕೆ.ಜಿ ಗೋಧಿ/ಅಕ್ಕಿ ನೀಡುವ ಭರವಸೆ ನೀಡಿದೆ. ಅಲ್ಲದೆ ಭಯೋತ್ಪಾದನೆಯನ್ನು ತಡೆಯಲು ಪೋಟಾದಂತಹ ಕಠಿಣ ಕಾನೂನನ್ನು ಜಾರಿಗೆ ತರುವುದಾಗಿ ಹೇಳಿದೆ.ರಾಮಮಂದಿರ ನಿರ್ಮಾಣಕ್ಕೆ ಪಕ್ಷವು ಬದ್ಧವೆಂದು ಹೇಳಿದ್ದು, ಗ್ರಾಮಗಳಿಗೆ ಉತ್ತರ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆಯನ್ನೂ ಪ್ರಣಾಳಿಕೆಯಲ್ಲಿ ನೀಡಲಾಗಿದೆ. ಅಲ್ಲದೆ ರಾಮಸೇತುವಿನ ರಕ್ಷಣೆಗೂ ಪಕ್ಷವು ಬದ್ಧವೆಂದು ಹೇಳಿಕೊಂಡಿದೆ.ಇದಲ್ಲದೆ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ವಿದ್ಯಾರ್ಥಿನಿಯರಿಗೆ ಸರ್ಕಾರದ ವತಿಯಿಂದ ಬೈಸಿಕಲ್ ನೀಡುವ ಭರವಸೆಯನ್ನೂ ಪಕ್ಷವು ನೀಡಿದೆ. ಶೇ, 4ರ ದರದಲ್ಲಿ ಸಾಲ ಸೇರಿದಂತೆ ಮಧ್ಯಮ ವರ್ಗವನ್ನು ಸಂತುಷ್ಟಗೊಳಿಸುವಂತೆ ಅನೇಕ ಯೋಜನೆಗಳ ಕುರಿತು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.ಆದಾಯ ತೆರಿಗೆ ವಿನಾಯಿತಿಯ ಮಿತಿಯನ್ನು ಮೂರು ಲಕ್ಷ ರೂಪಾಯಿಗೆ ಏರಿಸುವುದಾಗಿ ಹೇಳುವ ಮೂಲಕ ನೌಕರ ವರ್ಗವನ್ನು ಸೆಳೆಯುವ ಪ್ರಯತ್ನಕ್ಕೆ ಕೇಸರಿ ಪಕ್ಷ ಮುಂದಾಗಿದೆ.ಪಕ್ಷದ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ, ಪಕ್ಷಾಧ್ಯಕ್ಷ ರಾಜ್‌ನಾಥ್ ಸಿಂಗ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. |