ವರುಣ್ ಗಾಂಧಿ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧಿಸಿ ಸೆರೆಮನೆಗೆ ತಳ್ಳಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈ ಇದೆ ಆರೋಪವನ್ನು 'ಅವಿವೇಕಿತನದ್ದು' ಎಂಬುದಾಗಿ ಗೃಹ ಸಚಿವ ಪಿ.ಚಿದಂಬರಂ ಅವರು ತಳ್ಳಿಹಾಕಿದರಾದರೂ, ಮಾಯಾವತಿ ಸರ್ಕಾರದ ಈ ಕ್ರಮ ಸರಿಯೇ ಎಂದು ಕೇಳಿದ ಪ್ರಶ್ನೆಗೆ ಸೂಕ್ತ ಉತ್ತರ ನೀಡದೆ ನುಣುಚಿಕೊಂಡರು.
ವರುಣ್ ಅವರ ಬಂಧನವನ್ನು ಲೋಕನಾಯಕ ಜಯಪ್ರಕಾಶ್ ನಾರಾಯಣ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಂಧನಕ್ಕೆ ಹೋಲಿಸಿದ ಆಡ್ವಾಣಿ ಕ್ರಮವನ್ನು ಟೀಕಿಸಿದ ಚಿದು, ಇದು ಚುನಾವಣೆ ಸಂದರ್ಭದಲ್ಲಿ ಚೆನ್ನಾಗಿ ಕೇಳಬಹುದಾದರೂ ಇದರಿಂದ ಆಗುವಂತಹುದು ಏನೂ ಇಲ್ಲ ಎಂದು ನುಡಿದರು.
ಐದು ವರ್ಷಗಳ ಕಾಲ ಅಧಿಕಾರದಿಂದ ದೂರ ಉಳಿದಿರುವ ಬಿಜೆಪಿಗೆ ಕಾನೂನೇ ಮರೆತು ಹೋಗಿದೆ. ವರುಣ್ ಬಂಧನಕ್ಕೆ ರಾಜ್ಯ ಸರ್ಕಾರ ಆದೇಶ ನೀಡಿದ್ದು, ಇದರಲ್ಲಿ ಕೇಂದ್ರ ಏನುಮಾಡಲಿದೆ ಎಂದು ಪ್ರಶ್ನಿಸಿದರು. ಕೇಂದ್ರದ ಮೇಲಿನ ಆರೋಪವು ಅವಿವೇಕಿತನದ್ದು ಎಂದು ಅವರು ಬಿಜೆಪಿ ಯುವನಾಯಕ ವರುಣ್ ಬಂಧನದ ಹಿಂದೆ ಕೇಂದ್ರದ ಕೈ ಇದೆ ಎಂಬ ಕೇಸರಿ ಪಕ್ಷದ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತಾ ನುಡಿದರು. |