ಜೈಲಿನಲ್ಲಿರುವ ತನ್ನ ಪುತ್ರ ವರಣ್ ಗಾಂಧಿಯ ಭೇಟಿಗೆ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಹರಿಹಾಯ್ದಿರುವ ಮನೇಕಾ ಗಾಂಧಿ, ಆಕೆ ಒಬ್ಬ ತಾಯಿಯಾಗಿರುತ್ತಿದ್ದರೆ ತಾಯಿಯ ನೋವೇನೆಂಬುದು ಆಕೆಗೆ ಅರ್ಥವಾಗುತ್ತಿತ್ತು ಎಂಬ ಭಾವನಾತ್ಮಕ ಟೀಕೆ ಮಾಡಿದ್ದಾರೆ.
ಒಬ್ಬ ಯುವಕನ ಮೇಲೆ ನಡೆಯುತ್ತಿರುವ ಅನ್ಯಾಯದಿಂದ ತಾನು ಬೇಸತ್ತಿದ್ದೇನೆ ಎಂದು ಮನೇಕಾ ಹೇಳಿದ್ದಾರೆ. ವರುಣ್ ಗಾಂಧಿಗೆ ಏನಾದರೂ ಆದರೆ ಅದಕ್ಕೆ ಮಾಯಾವತಿಯೇ ಕಾರಣ ಎಂದು ಅವರು ಈ ಹಿಂದೆ ಹೇಳಿದ್ದರು.
"ಮಾಯಾವತಿ ಒಬ್ಬ ತಾಯಿಯಾಗಿರುತ್ತಿದ್ದರೆ ಆಕೆಗೆ ತಾಯಿಯ ನೋವೇನು ಎಂಬುದು ಅರ್ಥವಾಗುತ್ತಿತ್ತು. ಆದರೆ ಇದು ಅನ್ಯಾಯ ಮತ್ತು ಅಕ್ರಮ" ಎಂದು ಮನೇಕಾ ದೂರಿದ್ದಾರೆ.
ಎಂದಿನಂತೆ ತನ್ನ ಪುತ್ರನಿಗೆ ಆಹಾರ ಕೊಂಡೊಯ್ದ ಮನೇಕಾರಿಗೆ ಜಿಲ್ಲಾ ದಂಡಾಧಿಕಾರಿ ಗೌರವ್ ದಯಾಳ್ ಅವರು ಕಾನೂನು ತೊಡಕಿನ ಹಿನ್ನೆಲೆಯಲ್ಲಿ ಭೇಟಿಗೆ ಅವಕಾಶ ನಿರಾಕರಿಸಿದ್ದು, ಅವರು ಎಪ್ರಿಲ್ 8ರ ಬಳಿಕವಷ್ಟೆ ವರುಣ್ ಅವರನ್ನು ಭೇಟಿಯಾಗಬಹುದು ಎಂದು ತಿಳಿಸಿದ್ದರು.
ಎನ್ಎಸ್ಎಯಡಿ ಬಂಧಿತರಾದವರನ್ನು ವಾರದಲ್ಲಿ ಎರಡು ದಿವಸ ಮಾತ್ರ ಭೇಟಿಯಾಗುವ ಅವಕಾಶ ಇದೆ ಎಂದು ದಯಾಳ್ ಹೇಳಿದ್ದಾರೆ.
ಪಿಲಿಭಿತ್ ಜೈಲಿನಲ್ಲಿರಿಸಲಾಗಿದ್ದ ವರುಣ್ ಅವರನ್ನು ಭದ್ರತಾ ಕಾರಣಗಳಿಗಾಗಿ ಬುಧವಾರ ಇಟಾ ಜೈಲಿಗೆ ವರ್ಗಾಯಿಸಲಾಗಿದೆ. |