ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡಿಸ್ ಅವರು ಇನ್ನೆಂದಿಗೂ ಜನತಾದಳ ಸಂಯುಕ್ತದ(ಜೆಡಿಯು) ಭಾಗವಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಘೋಷಿಸಿದ್ದಾರೆ. ತನ್ನ ಅನಾರೋಗ್ಯದ ನೆಪಒಡ್ಡಿ ಪಕ್ಷವು ಟಿಕೆಟ್ ನಿರಾಕರಿಸಿರುವುದಕ್ಕೆ ಸಡ್ಡು ಹೊಡೆದಿರುವ ಜಾರ್ಜ್ ಫರ್ನಾಂಡಿಸ್ ಸ್ವತಂತ್ರ ಅಭ್ಯರ್ಥಿಯಾಗಿ ಮುಜಾಫರಾಪುರದಿಂದ ನಾಮಪತ್ರ ಸಲ್ಲಿಸಿದ್ದಾರೆ.ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ಚುನಾವಣೆಯಲ್ಲಿ ಸ್ಫರ್ಧಿಸಿರುವ ಜಾರ್ಜ್ ಅಥವಾ ಇನ್ಯಾರೇ ಆದರೂ, ಅವರಿಗೂ ಜೆಡಿಯುಗೂ ಯಾವುದೇ ಸಂಬಂಧವಿಲ್ಲ ಎಂದು ನಿತೀಶ್ ಹೇಳಿದ್ದಾರೆ." ಜಾರ್ಜ್ ಅವರು ಪಕ್ಷೇತರವಾಗಿ ಸ್ಫರ್ಧಿಸಲು ನಿರ್ಧರಿಸಿದ ಬಳಿಕ ಅವರು ಇನ್ನೆಂದಿಗೂ ಪಕ್ಷದಲ್ಲಿ ಇಲ್ಲ. ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ನಿತೀಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಬ್ಬರು ಹಾಲಿ ಆರ್‌ಜೆಡಿ ಸಂಸದರು ಪಕ್ಷ ಸೇರಿರುವುದನ್ನು ಘೋಷಿಸಲು ಅವರು ಪತ್ರಿಕಾಗೋಷ್ಠಿ ಕರೆದಿದ್ದರು.ಜಾರ್ಜ್ ಅವರ ಹೇಳಿಕೆಗಳು ಮತ್ತು ಚಟುವಟಿಕೆಗಳನ್ನು ಇನ್ನು ಮುಂದೆ ಜೆಡಿಯುನೊಂದಿಗೆ ಸಂಪರ್ಕಿಸಬಾರದು. ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ನಿತೀಶ್ ತಿಳಿಸಿದ್ದಾರೆ. ಅಲ್ಲದೆ, ನಿತೀಶ್ ಘೋಷಣೆಯ ಬಳಿಕ ಪಕ್ಷದ ಕಚೇರಿಯಲ್ಲಿದ್ದ ಜಾರ್ಜ್ ಅವರ ಭಾವಚಿತ್ರಗಳನ್ನೂ ತೆಗೆಯಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಈ ಮಧ್ಯೆ ಮುಜಾಫರಾಪುರದ ಜೆಡಿಯು ಅಧಿಕೃತ ಅಭ್ಯರ್ಥಿ ಜೈ ಪ್ರಕಾಶ್ ನಿಶಾದ್ ಅವರು ಪಕ್ಷದೊಳಗಿನಿಂದ ವಿರೋಧ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಜೆಡಿಯುವಿನ ಮಿತ್ರಪಕ್ಷವಾದ ಬಿಜೆಪಿಯ ನಿಶಾದ್ ಅವರನ್ನು ಬೆಂಬಲಿಸುವುದಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆನ್ನಲಾಗಿದೆ. |