ಪ್ರಿಯಾಂಕಾ ಗಾಂಧಿ ಅವರ ಮಾವ ರಾಜಿಂದರ್ ವಾದ್ರಾ ಅವರು ದಕ್ಷಿಣ ದೆಹಲಿಯ ಅತಿಥಿ ಗೃಹ ಒಂದರಲ್ಲಿ ಶುಕ್ರವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
"ರಾಜಿಂದರ್ ಅವರು ಹೌಸ್ ಖಾಸ್ ಪ್ರದೇಶದ ಸಿಟಿ ಇನ್ ಅತಿಥಿ ಗೃಹದಲ್ಲಿ ಕತ್ತಿಗೆ ವಯರ್ ಬಿಗಿದು ಫ್ಯಾನಿಗೆ ನೇತುಹಾಕಿಕೊಂಡಿದ್ದಾರೆ. ರೂಮ್‌ಬಾಯ್ ಒಬ್ಬಾತ ಮುಂಜಾನೆ 9.30ರ ವೇಳೆ ಇದನ್ನು ನೋಡಿದ್ದ" ಎಂಬುದಾಗಿ ಪೊಲೀಸಧಿಕಾರಿ ಹೇಳಿದ್ದಾರೆ.
"ಅತಿಥಿಗೃಹದ ನೌಕರರು ರಾಜಿಂದರ್ ಅವರನ್ನು ಸಾಕೆತ್‌ನಲ್ಲಿರುವ ಖಾಸಗೀ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಬಳಿಕ ಮೃತದೇಹವನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಒಯ್ಯಲಾಯಿತು" ಎಂದು ಅವರು ತಿಳಿಸಿದ್ದಾರೆ.
60ರ ಹರೆಯದ ವಾದ್ರಾ ಅವರು ಕಳೆದ ಕೆಲವು ಸಮಯದಿಂದ ಅತಿಥಿ ಗೃಹದಲ್ಲಿ ನೆಲೆಸಿದ್ದರು. ಅವರು ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ. ಇದಕ್ಕೂ ಅವರು ಮೊದಲು ಮೊರಾದಾಬಾದಿನ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಲೋಧಿ ರಸ್ತೆಯ ಚಿತಾಗಾರದಲ್ಲಿ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಮೊರಾದಾಬಾದ್ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿಗೆ ಕಾರ್ಯಕರ್ತರ ನೇಮಕಕ್ಕೆ ಪ್ರಿಯಾಂಕರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿ ಪ್ರಿಯಾಂಕ ಪತಿ ರಾಬರ್ಟ್ ವಾದ್ರಾ ತನ್ನ ತಂದೆ ರಾಜಿಂದರ್ ವಾದ್ರಾ ಹಾಗೂ ರಿಚರ್ಡ್ ಅವರಿಗೆ ಸುಮಾರು ಏಳೆಂಟು ವರ್ಷಗಳ ಹಿಂದೆ ನೋಟೀಸು ಕಳುಹಿಸಿದ್ದರು ಎಂದು ಹೇಳಲಾಗಿದೆ.
ಆದರೆ ಈ ಆರೋಪಗಳನ್ನು ಅಲ್ಲಗಳೆದಿದ್ದ ರಾಜಿಂದರ್, ರಾಬರ್ಟ್ ಪ್ರಿಯಾಂಕರನ್ನು ವರಿಸಿರುವುದಕ್ಕೆ ತನ್ನ ಅಸಂತೋಷ ವ್ಯಕ್ತಪಡಿಸಿದ್ದರು. |