ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಶನಿವಾರ ಅಮೇಠಿ ಕ್ಷೇತ್ರದಿಂದ ಲೋಕಸಭಾ ಚುನಾವಣೆ ಸ್ಫರ್ಧೆಗಾಗಿ ಸುಲ್ತಾನ್‌ಪುರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಪಕ್ಷಾಧ್ಯಕ್ಷೆ ಸೋನಿಯಾಗಾಂಧಿ ಉಪಸ್ಥಿತರಿದ್ದರು.ರಾಹುಲ್ ಅವರು ಸುಲ್ತಾನ್‌ಪುರಕ್ಕೆ ಶುಕ್ರವಾರ ಸಾಯಂಕಾಲವೇ ಆಗಮಿಸಿದ್ದರು. ಅವರು ನಾಮಪತ್ರ ಸಲ್ಲಿಸಲು ತೆರಳಿದ ವೇಳೆ ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ನಿಂತಿದ್ದ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಪುಷ್ಪವೃಷ್ಟಿಗೈದು ಅದ್ಭುತ ಸ್ವಾಗತ ಕೋರಿದರು. ಸೋನಿಯಾ ಹಾಗೂ ರಾಹುಲ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದ ಜನತೆ ತಮ್ಮ ನಾಯಕ, ನಾಯಕಿಗೆ ಗುಲಾಬಿ ದಳಗಳನ್ನು ಚಿಮ್ಮಿದರು ಕಾಂಗ್ರೆಸ್ ಧ್ವಜಗಳನ್ನು ಬೀಸಿದರು. ಆವರು ರಾಹುಲ್ ಭಾವಚಿತ್ರವಿರುವ ಭಿತ್ತಿಚಿತ್ರಗಳನ್ನೂ ಹಿಡಿದಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಅವರುಗಳು ತೆರೆದ ಜೀಪಿನ ಮೇಲೇರಿ ನೆರದ ಅಪಾರ ಜನಸ್ತೋಮದತ್ತ ಕೈಬೀಸಿದರು.ರಾಹುಲ್ ನಾಮಪತ್ರ ಸಲ್ಲಿಸುವ ವೇಳೆಗೆ, ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೀಟಾ ಬುಹುಗುಣ ಜೋಷಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಪ್ರಮೋದ್ ತಿವಾರಿ, ಕ್ಯಾಪ್ಟನ್ ಸತೀಶ್ ಶರ್ಮಾ ಮತ್ತು ಸುಲ್ತಾನ್‌ಪುರ ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ಸಿಂಗ್ ಅವರೂ ಸಹ ಉಪಸ್ಥಿತರಿದ್ದರು.ರಾಹುಲ್ ಅವರು ಅಮೇಠಿಯಿಂದ ಚುನಾವಣೆಗೆ ಸ್ಫರ್ಧಿಸುತ್ತಿರುವುದು ಇದು ಎರಡನೆಯಬಾರಿಯಾಗಿದೆ. 2004ರ ಚುನಾವಣೆಯಲ್ಲೂ ಅವರು ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬಂದಿದ್ದರು. ರಾಹುಲ್ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇದೇ ಕ್ಷೇತ್ರವನ್ನು ಹಲವಾರು ಬಾರಿ ಪ್ರತಿನಿಧಿಸಿದ್ದರು. ಅವರ ಬಳಿಕ ಸೋನಿಯಾಗಾಂಧಿ ಅವರೂ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಬಳಿಕ ಪುತ್ರನಿಗೆ ತನ್ನ ಕ್ಷೇತ್ರ ಬಿಟ್ಟುಕೊಟ್ಟು ತಾನು ರಾಯ್‌ಬರೇಲಿ ಕ್ಷೇತ್ರವನ್ನು ಆಯ್ದುಕೊಂಡಿದ್ದರು.ರಾಹುಲ್ ಆಸ್ತಿವಿವರರಾಹುಲ್ ನಾಮಪತ್ರದ ಜತೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರದ ಪ್ರಕಾರ ಅವರ ಆಸ್ತಿವಿವರ ಇಂತಿದೆ. ವಿವಿಧ ಬ್ಯಾಂಕುಗಳಲ್ಲಿ 10 ಲಕ್ಷ ರೂಪಾಯಿ ಠೇವಣಿ, ಮೆಹ್ರೌಲಿ ಮತ್ತು ಫರಿದಾಬಾದ್‌ಗಳಲ್ಲಿ ಎರಡು ತೋಟದ ಮನೆಗಳು, ದೆಹಲಿಯ ಸಾಕೇತ್ ಪ್ರದೇಶದಲ್ಲಿನ ಮೆಟ್ರೋಪಾಲಿಟನ್ ಮಲ್‌ನಲ್ಲಿ ಎರಡು ಅಂಗಡಿಗಳು, ಮತ್ತು 1.5ಲಕ್ಷ ರೂಪಾಯಿ ಮೊತ್ತದ ಆಭರಣಗಳಿವೆ ಎಂದು ಅವರು ಘೋಷಿಸಿದ್ದಾರೆ. |