ಮನಮೋಹನ್ ಸಿಂಗ್ ಅವರು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯೇ ಹೊರತು ಯುಪಿಎಯ ಪ್ರಧಾನಿ ಅಭ್ಯರ್ಥಿಯಲ್ಲ, ಯುಪಿಎ ಅಭ್ಯರ್ಥಿಯನ್ನು ಇನ್ನಷ್ಟೆ ನಿರ್ಧರಿಸಬೇಕಾಗಿದೆ ಎಂದು ಎನ್‌ಸಿಪಿ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ.
ಭುವನೇಶ್ವರದಲ್ಲಿ ನಡೆದ ತೃತೀಯ ರಂಗದ ಸಮಾವೇಶದಲ್ಲಿ ಪವಾರ್ ಅವರ ಉದ್ದೇಶಿತ ಭಾಗವಹಿಸುವಿಕೆ ಕುರಿತು ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ತಿರುಗೇಟು ನೀಡಿರುವ ಪವಾರ್, ರಾಜಕೀಯ ಚಟುವಟಿಕೆಗಳಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬ ಕುರಿತು ತನಗೆ ಯಾರ ಸಲಹೆಯ ಅವಶ್ಯಕತೆ ಇಲ್ಲ ಎಂದು ಕಟುವಾಗಿ ಹೇಳಿದ್ದಾರೆ.
"ಯುಪಿಎ ಸರ್ಕಾರದಲ್ಲಿ ತಾನು ಸಚಿವನಾಗಿದ್ದೆ. ಈ ಸಂದರ್ಭದಲ್ಲಿ ಯುಪಿಎ ನೀಡಿದ್ದ ಬೆಂಬಲ ಮರೆಯಲು ಸಾಧ್ಯವಿಲ್ಲ. ಕಳೆದ ನಾಲ್ಕುವರೆ ವರ್ಷಗಳಲ್ಲಿ ಯುಪಿಎ ಸರ್ಕಾರದ ಸ್ಥಿರತೆಗೆ ಎಡಪಕ್ಷಗಳು ನೀಡಿರುವ ಕೊಡುಗೆಯನ್ನು ತಾನು ನಿರ್ಲಕ್ಷಿಸುವುದಿಲ್ಲ ಎಂಬುದಾಗಿಯೂ ಅವರು ನುಡಿದರು.
"ಭುವನೇಶ್ವರದಲ್ಲಿ ಶುಕ್ರವಾರ ಸಮಾವೇಶವನ್ನು ಆಯೋಜಸಿದ್ದು ಬಿಜೆಡಿಯೇ ವಿನಹ, ಎಡಪಕ್ಷಗಳು ಅಥವಾ ತೃತೀಯ ರಂಗವಲ್ಲ. ಈ ಪಕ್ಷದೊಂದಿಗೆ ಒರಿಸ್ಸಾದಲ್ಲಿ ಎನ್‌ಸಿಪಿಯು ಮೈತ್ರಿ ಹೊಂದಿದೆ. ನಾವು ಅಲ್ಲಿ ಎಂಟು ಸ್ಥಾನಗಳಲ್ಲಿ ಸ್ಫರ್ಧಿಸುತ್ತಿದ್ದೇವೆ. ನಾನು ತೃತೀಯ ರಂಗದ ಸ್ನೇಹಿಯಲ್ಲ, ಆದರೆ ವೈಯಕ್ತಿಕ ಸ್ನೇಹ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ತಾನು ತನ್ನಪಕ್ಷದ ಪರ ಪ್ರಚಾರ ನಡೆಸಲು ಒಂದು ದಿವಸ ಒರಿಸ್ಸಾಗೆ ತೆರಳುತ್ತೇನೆ" ಎಂದು ಅವರು ಹೇಳಿದ್ದಾರೆ. |