ಜಾತ್ಯತೀತತೆ ಎನ್ನುವುದು ಭಾರತದ ಮಣ್ಣಿನಲ್ಲಿಯೇ ಆಳವಾಗಿ ಬೇರುಬಿಟ್ಟಿರುವಂತಹದ್ದು ಎಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಈ ದೇಶದಲ್ಲಿ ಕೋಮುವಾದದ ಅಜೆಂಡಾ ಯಾವುದೇ ಕಾರಣಕ್ಕೂ ಯಶಸ್ವಿಯಾಗಲಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಬೆಂಬಲಿಗರಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಖ್ಯ ತೊರೆಯುವ ಮೂಲಕ, ಜನರ ಧಾರ್ಮಿಕ ಭಾವನೆಗಳೊಂದಿಗೆ ಚಲ್ಲಾಟವಾಡುವುದು ಸರಿಯಲ್ಲ ಎಂಬ ಬಹಿರಂಗ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿ ಕೋಮುವಾದದ ಅಜೆಂಡ ಯಶಸ್ವಿಯಾಗಲಾರದು, ಈ ದೇಶದ ಆತ್ಮದೊಳಗೆ ಜಾತ್ಯತೀತತೆ ಎನ್ನುವುದು ರೂಢಿಮೂಲವಾಗಿ ಬೇರೂರಿದೆ ಎಂದರು. ಬಿಜೆಪಿ ಒಂದು ರಾಜಕೀಯ ಪಕ್ಷ, ರಾಮಮಂದಿರ ಕಟ್ಟುತ್ತೇವೆ ಎನ್ನುವುದು ಆ ಪಕ್ಷದ ದೃಷ್ಟಿಕೋನವಾಗಿತ್ತು. ಅದರಂತೆ ಹಲವಾರು ಸಮಸ್ಯೆಗಳು ಇದ್ದಿದ್ದವು.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಮತ್ತೆ ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರ ನಿರ್ಮಾಣ, ಸಮಾನ ನಾಗರಿಕ ಸಂಹಿತೆ ಹಾಗೂ 370ನೇ ವಿಧಿ ಜಾರಿ ಬಗ್ಗೆ ಪ್ರಸ್ತಾಪಿಸಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ನಿತೀಶ್, ಈ ಎಲ್ಲವನ್ನು ಈಡೇರಿಸಬೇಕಾದ್ರೆ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಬಹುಮತ ಪಡೆದಾಗ ಮಾತ್ರ ಸಾಧ್ಯ. ಆದರೆ ಇವೆಲ್ಲ ಜನ ಸಾಮಾನ್ಯರ ಅಜೆಂಡಾ ಆಗಲು ಸಾಧ್ಯವಿಲ್ಲ ಎಂದು ಹೇಳಿದರು. |