ಮುಂಬೈ ದಾಳಿ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವಲ್ಲಿ ಆಡಳಿತಾರೂಢ ಯುಪಿಎ ಸರಕಾರ ಸಂಪೂರ್ಣ ವಿಫಲವಾಗಿರುವುದಾಗಿ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಹೆಚ್ಚಿನದೇನನ್ನೂ ನಿರೀಕ್ಷಿಸುವಂತಿಲ್ಲ ಹಾಗಾಗಿ ದಾಳಿ ಕುರಿತಂತೆ ಭಾರತ ಪಾಕಿಸ್ತಾನಕ್ಕೆ 'ಪ್ರೇಮ ಪತ್ರ'ಗಳನ್ನು ಬರೆಯುವುದೇ ಉತ್ತಮ ಎಂದು ಕಟುವಾಗಿ ಟೀಕಿಸಿದರು.ಕಳೆದ ವರ್ಷ ನವೆಂಬರ್‌ನಲ್ಲಿ ಮುಂಬೈಯಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಯುಪಿಎ ಸರ್ಕಾರ ಪಾಕಿಸ್ತಾನದ ವಿರುದ್ಧ ಆಕ್ರಮಣಕಾರಿ ನಿಲುವು ತೆಗೆದುಕೊಳ್ಳಬೇಕಾಗಿತ್ತು. ಆದರೆ ಏನು ಮಾಡುವುದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದೆ, ಕೇಂದ್ರ ಮೃಧು ಧೋರಣೆ ತಳೆಯಿತು ಹಾಗೂ ಪಾಕ್ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವಲ್ಲಿಯೂ ವಿಫಲವಾಗಿದೆ ಎಂದು ಮೋದಿ ಕಿಡಿಕಾರಿದರು.ಒರಿಸ್ಸಾಕ್ಕೆ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿರುವ ವೇಳೆ ರಾಯ್‌ಪುರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಮನಮೋಹನ್ ಸಿಂಗ್ 'ದುರ್ಬಲ ಪ್ರಧಾನಿ' ಎಂದು ಮತ್ತೊಮ್ಮೆ ಲೇವಡಿ ಮಾಡಿದರು.ಕಾಂಗ್ರೆಸ್ ಪಕ್ಷ ತನ್ನ ಹಳೇ ಚಾಳಿ ಎಂಬಂತೆ ವೋಟ್ ಬ್ಯಾಂಕ್ ರಾಜಕೀಯವನ್ನೇ ಮುಂದುವರಿಸಿದೇ ವಿನಃ, ಇದು ಯಾವತ್ತೂ ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುವುದಿಲ್ಲ ಎಂದು ಹೇಳಿದರು. |