ಕಳೆದ ಹದಿನೆಂಟು ವರ್ಷದಲ್ಲಿ ಹತ್ತು ಮಂದಿಯನ್ನು ವರಿಸಿ, ವಂಚಿಸಿ, ಬೆದರಿಸಿ ದೋಚಿದ 32ರ ಹರೆಯದ ಬೆಂಗಳೂರಿನ ಮಹಿಳೆಯೊಬ್ಬಾಕೆಯನ್ನು ಸಿಯಾನ್ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈಕೆಯ ಈ ಕಾರ್ಯಕ್ಕೆ ಕುಮ್ಮಕ್ಕು ನೀಡಿರುವ ಆಕೆಯ ಹೆತ್ತವರಾದ ಇಕ್ಬಾಲ್ ಪಾಶಾ ಮತ್ತು ತಾಯಿ ಗುಲ್ನಾಡ್ ಅವರನ್ನೂ ಕಂಬಿಗಳ ಹಿಂದೆ ತಳ್ಳಲಾಗಿದೆ.
ಈಕೆಯ ಪತಿ ಸಯ್ಯದ್ ಅಹ್ಮದ್ ಎಂಬ 35ರ ಹರೆಯದ ರಫ್ತು ಉದ್ಯಮಿ, ತನ್ನ ಪತ್ನಿ ಕೌಸರ್ ಬೇಗಂ ಹಾಗೂ ಆಕೆಯ ಹೆತ್ತವರು ಕಳೆದೆರಡು ವರ್ಷಗಳಿಂದ ತನ್ನನ್ನು ಬ್ಲಾಕ್‌ಮೇಲ್ ಮಾಡುತ್ತಾರೆ ಎಂದು ಸಿಯಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೂಲಕ ಈ ವಂಚಕಿಯ ನಿಜ ಬಣ್ಣ ಬಯಲಿಗೆ ಬಂದಿದೆ.
"ಈ ಮಹಿಳೆ ಹಾಗೂ ಆಕೆಯ ಹೆತ್ತವರು ತಾರಾ ಹೋಟೇಲ್‌ಗಳಿಗೆ ಭೇಟಿ ನೀಡಿ ಅಲ್ಲಿ ಧನವಂತ ವ್ಯಾಪಾರಿಗಳಿಗೆ ಹೊಂಚು ಹಾಕುತ್ತಿದ್ದರು. ಕೌಸರ್ ಬೇಗಂ ಬಲೆಗೆ ಬಿದ್ದ ಮಿಕಗಳೊಂದಿಗೆ ಸ್ನೇಹ ಸಂಪಾದಿಸಿ ಅವರನ್ನು ಮದುವೆಗೆ ಒಪ್ಪಿಸುವಲ್ಲಿ ಸಫಲಳಾಗುತ್ತಿದ್ದಳು. ವಿವಾಹದ ಬಳಿಕ, ಆಕೆ ಬೆಲೆಬಾಳುವ ವಸ್ತುಗಳೊಂದಿಗೆ ಮನೆ ಬಿಟ್ಟು ತೆರಳಿ, ಬಳಿಕ ಪತಿ ಹಾಗೂ ಪತಿಯ ಮನೆಯವರ ವಿರುದ್ಧ ವರದಕ್ಷಿಣೆ ಕೇಸು ದಾಖಲಿಸುತ್ತಿದ್ದಳು. ಆಹಮದ್ ಈಕೆಗೆ ಒಂಬತ್ತನೇ ಗಂಡನಾಗಿದ್ದ" ಎಂಬುದಾಗಿ ಅಹ್ಮದ್ ವಕೀಲರಾಗಿರುವ ಗಣೇಶ್ ಅಯ್ಯರ್ ಹೇಳಿದ್ದಾರೆ.
ಇವರಿಬ್ಬರು 2006ರಲ್ಲಿ ವಿವಾಹವಾಗಿದ್ದು, ಮದುವೆಯಾದ 15 ದಿನದಲ್ಲಿ ತನ್ನ ಪತಿಮನೆಯವರು ನೀಡಿದ ಚಿನ್ನ ಹಾಗೂ ವಜ್ರಾಭರಣಗಳೊಂದಿಗೆ ಈಕೆ ಯಾರಿಗೂ ತಿಳಿಸದೆ ಬೆಂಗಳೂರಿನ ತನ್ನ ತವರಿಗೆ ತೆರಳಿದ್ದಳು.
ಕೌಸರ್ ಬೇಗಂ ಹಾಗೂ ಆಕೆಯ ಹೆತ್ತವರು ಅಹಮದ್ ವಿರುದ್ಧ ಸಿಯಾನ್ ಠಾಣೆಯಲ್ಲಿ ದೂರು ದಾಖಲಿಸಿದ್ದು, "ಅಹಮದ್ ಹಾಗೂ ಆತನ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ ಮದುವೆ ಮದುವೆಯ ವೇಳೆಗೆ 15 ಲಕ್ಷ ಪಡೆದಿದ್ದಾರೆ" ಎಂದು ದೂರಿದ್ದು, ಹಣ ವಾಪಾಸ್ ಕೊಡಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದರು.
ಅಂದಹಾಗೆ ಈ ಕೌಸರ್‌ಳ ಹಾಲಿ ಹಾಗೂ ಹತ್ತನೆಯ ಪತಿ ದುಬೈ ಮೂಲದ ಓರ್ವ ವೈದ್ಯ. |