ಯುಪಿಎ ಮೈತ್ರಿಕೂಟದ ಅಂಗಪಕ್ಷಗಳು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಒಪ್ಪುತ್ತಿಲ್ಲ ಎಂದು ಅವಹೇಳನ ಮಾಡಿರುವ ಬಿಜೆಪಿ ನಾಯಕ ನರೇಂದ್ರ ಮೋದಿ ಅವರು, ಧೈರ್ಯವಿದ್ದರೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಚುನಾವಣೆಗೆ ಮುನ್ನ ಸಾರ್ವಜನಿಕ ಚರ್ಚೆಗೆ ಆಗಮಿಸಲಿ ಎಂದು ಸವಾಲು ಹಾಕಿದ್ದಾರೆ.
"ಯಾಕೆ ಸೋನಿಯಾ ಮೇಡಂ ಮತ್ತು ಮನಮೋಹನ್ ಸಿಂಗ್ ಅವರು ಎನ್‌ಡಿಎ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿಯವರೊಂದಿಗೆ ಸಾರ್ವಜನಿಕ ಚರ್ಚೆಗೆ ಬರಲು ಹೆದರುತ್ತಾರೆ" ಎಂದು ಅವರು ಇಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡುತ್ತಾ ಪ್ರಶ್ನಿಸಿದರು.
ಈ ದೇಶ ಕಂಡ ಅತ್ಯಂತ ದುರ್ಬಲ, ಅಶಕ್ತ ಹಾಗೂ ನಿರ್ಧಾರ ಕೈಗೊಳ್ಳಲಾಗದ ಪ್ರಧಾನಿ ಮನಮೋಹನ್ ಸಿಂಗ್ ಎಂದು ಹೇಳಿದ ಮೋದಿ, ಕಾಂಗ್ರೆಸ್‌ನಲ್ಲಿರುವ ಹೆಚ್ಚಿನವರು ಸಿಂಗ್ ಅವರನ್ನು ತಮ್ಮ ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ನುಡಿದರು.
"ಕಾಂಗ್ರೆಸಿಗರೇ ಸಿಂಗ್ ಅವರನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳದಿರುವಾಗ ಯುಪಿಎ ಭಾಗೀದಾರರು ಅವರನ್ನು ಪ್ರಧಾನಿ ಎಂದು ಗೌರವಿಸಲು ಹೇಗೆ ಸಾಧ್ಯ ಎಂದ ಮೋದಿ, ಲಾಲೂ ಪ್ರಸಾದ್ ಯಾದವ್, ರಾಮ್ ವಿಲಾಸ್ ಪಾಸ್ವಾನ್ ಮತ್ತು ಇತರರು ಸಂಪುಟದಲ್ಲಿದ್ದರೂ, ಸಿಂಗ್ ಅವರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿದರು.
ತನ್ನೊಬ್ಬ ಸಹೋದ್ಯೋಗಿ ಯಾವುದೇ ಸಂಪುಟ ಸಭೆಗಳಲ್ಲಿ ಭಾಗವಹಿಸದೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅಸಮರ್ಥರಾಗಿರುವುದು ಅವರೆಷ್ಟು ಅಸಾಹಾಯಕ ಪ್ರಧಾನಿ ಎಂಬುದನ್ನು ಸೂಚಿಸುತ್ತದೆ ಎಂದು ಬೆಟ್ಟು ಮಾಡಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಲಿಪಶುಗಳಾಗಿರುವ ಬಡಜನತೆಯ ನಾಡಿಮಿಡಿತವನ್ನು ಅರ್ಥೈಸುವಲ್ಲಿ ತಾಯಿ ಸೋನಿಯಾ ವಿಫಲಾಗಿದ್ದಾರೆ ಎಂದು ಅವರು ಟೀಕಿಸಿದರು. |