ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭಾ ಚುನಾವಣಾ ಸ್ಫರ್ಧೆಗಾಗಿ ಸೋಮವಾರ ರಾಯ್‌ಬರೇಲಿ ಕ್ಷೇತ್ರದಿಂದ ತಮ್ಮ ನಾಮಪತ್ರ ಸಲ್ಲಿಸಿದರು.ಚುನಾವಣಾಧಿಕಾರಿ ಕಚೇರಿಗೆ 12.20ಕ್ಕೆ ತಲುಪಿದ ಅವರು 10 ನಿಮಿಷಗಳ ಕಾಲ ಅಲ್ಲಿದ್ದು ತಮ್ಮ ನಾಮಪತ್ರ ಸಲ್ಲಿಸಿದರು. ಇಲ್ಲಿ ಎರಡನೆ ಹಂತವಾದ ಎಪ್ರಿಲ್ 30ರಂದು ಚುನಾವಣೆ ನಡೆಯಲಿದೆ.ನಾಮಪತ್ರ ಸಲ್ಲಿಸಲು ಸೋನಿಯಾ ತೆರಳಿದ ವೇಳೆ ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ನೆರೆದಿದ್ದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅವರ ಕಾರಿಗೆ ಗುಲಾಬಿ ಪುಷ್ಪ ದಳಗಳನ್ನು ಚೆಲ್ಲಿದರು. ಮೊದಲಿಗೆ ಪಕ್ಷದ ಕಚೇರಿಗೆ ತೆರಳಿದ ನಾಯಕಿ ಅಲ್ಲಿ ನಡೆದ ಹೋಮದಲ್ಲಿ ಭಾಗವಹಿಸಿದರು. ಅವರು ಪ್ರತಿಬಾರಿಯೂ ನಾಮಪತ್ರ ಸಲ್ಲಿಸಲು ತೆರಳುವ ವೇಳೆಗೆ ಇಲ್ಲಿ ಹೋಮ ನಡೆಸುವುದು ನಡೆದು ಬಂದಿರುವ ಸಂಪ್ರದಾಯ. ಬಳಿಕ ಅವರು ಅಲ್ಲಿಂದ ತೆರಳಿದರು. ಈ ವೇಳೆ ಅವರೊಂದಿಗೆ ಪುತ್ರ ರಾಹುಲ್ ಗಾಂಧಿ ಹಾಗೂ ಇನ್ನಿತರ ನಾಯಕರು ಉಪಸ್ಥಿತರಿದ್ದರು. |