ಕಾಂಗ್ರೆಸ್ ಅಧ್ಯಕ್ಷೆ ಮತ್ತು ಕಳೆದ ಐದು ವರ್ಷಗಳಿಂದ ದೇಶವನ್ನು ಆಳಿದ್ದ ಯುಪಿಎಯ ಅಧ್ಯಕ್ಷೆಯೂ ಆಗಿರುವ ಸೋನಿಯಾ ಗಾಂಧಿಗೆ ಒಂದೇ ಒಂದು ಸ್ವಂತ ಕಾರಿಲ್ಲ, ಆದರೆ ಇಟಲಿಯಲ್ಲೊಂದು ಮನೆಯು ಆಕೆಯ ಹೆಸರಿಗಿದೆ. ಸೋಮವಾರ ರಾಯ್ ಬರೇಲಿ ಕ್ಷೇತ್ರದಿಂದ ಮರಳಿ ನಾಮಪತ್ರ ಸಲ್ಲಿಸಿರುವ ಸೋನಿಯಾ ಗಾಂಧಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಇಟಲಿಯಲ್ಲಿರುವ ಮನೆಯ ಮೌಲ್ಯ 18.02 ಲಕ್ಷ ರೂ. ಈ ಅಫಿದವಿಟ್ ಪ್ರಕಾರ ಸೋನಿಯಾ ಆಸ್ತಿ ಒಟ್ಟು 1.38 ಕೋಟಿ ರೂ. ಅಂದರೆ ಮಗ ರಾಹುಲ್ ಗಾಂಧಿಗಿಂತಲೂ ಸುಮಾರು ಒಂದು ಕೋಟಿಯಷ್ಟು ಕಡಿಮೆ. ಅಮೇಠಿಯಲ್ಲಿ ಸ್ಪರ್ಧಿಸುತ್ತಿರುವ ರಾಹುಲ್ 2.2 ಕೋಟಿ ಮೌಲ್ಯದ ಸೊತ್ತು ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಬಹಿರಂಗಪಡಿಸಿದ್ದರು.
ಸೋನಿಯಾ ಬಳಿ 75 ಸಾವಿರ ರೂ. ನಗದು ಮತ್ತು ಬ್ಯಾಂಕುಗಳಲ್ಲಿ 28.61 ಲಕ್ಷ ರೂ. ಠೇವಣಿ ಇದೆಯಂತೆ. 20 ಲಕ್ಷ ರೂ. ಮೌಲ್ಯದ ಮ್ಯೂಚುವಲ್ ಫಂಡ್ ಮತ್ತು 12 ಲಕ್ಷ ರೂ. ಮೊತ್ತದ ರಿಸರ್ವ್ ಬ್ಯಾಂಕ್ ಬಾಂಡ್‌ಗಳು ಕೂಡ ಅವರಲ್ಲಿವೆ. 1.99 ಲಕ್ಷ ಮೊತ್ತವನ್ನು ಅಂಚೆಕಚೇರಿಯಲ್ಲಿ ಹೂಡಲಾಗಿದ್ದು, 24.88 ಲಕ್ಷದ ಸಾರ್ವಜನಿಕ ಭವಿಷ್ಯ ನಿಧಿ ಇದೆ. 2.5 ಕಿಲೋ ತೂಕದ ಒಡವೆಯ ಮೌಲ್ಯ 11 ಲಕ್ಷ ರೂ. 88 ಕಿಲೋ ಬೆಳ್ಳಿ ಇದ್ದು ಅದರ ಬೆಲೆ 18 ಲಕ್ಷ ರೂ. ಎಂದು ಅಫಿಡವಿಟ್‌ನಲ್ಲಿ ನಮೂದಿಸಲಾಗಿದೆ.
2.19 ಲಕ್ಷ ರೂ. ಮೌಲ್ಯದ ಕೃಷಿ ಜಮೀನು ಆಕೆಯ ಹೆಸರಲ್ಲಿದ್ದು, ಇದು ಎಲ್ಲಿರುವುದು ಎಂದು ನಮೂದಿಸಲಾಗಿಲ್ಲ. ಕಳೆದ ಹಣಕಾಸು ವರ್ಷದಲ್ಲಿ ಆಕೆ 5.58 ಲಕ್ಷ ರೂ. ಆದಾಯ ತೆರಿಗೆ ಮತ್ತು 32,512 ರೂ. ಸಂಪತ್ತು ತೆರಿಗೆ ಕಟ್ಟಿದ್ದಾರೆ.
ಶೈಕ್ಷಣಿಕ ವಿಭಾಗದಲ್ಲಿ ನಮೂದಿಸಲಾದ ದಾಖಲೆ ಪ್ರಕಾರ, ಸೋನಿಯಾ ಗಾಂಧಿ ಎರಡು ಕೋರ್ಸ್ ಮಾಡಿದ್ದಾರೆ. ವಿದೇಶೀ ಭಾಷೆಗಳಲ್ಲಿ ಮೂರು ವರ್ಷದ ಕೋರ್ಸ್ (ಇಂಗ್ಲಿಷ್ ಮತ್ತು ಫ್ರೆಂಚ್) ಇಟಲಿಯ ಟ್ಯುರಿನ್ ಸಂಸ್ಥೆಯಿಂದ ಮತ್ತು ಕೇಂಬ್ರಿಜ್‌ನ ಲೆನಾಕ್ಸ್ ಕುಕ್ ಸ್ಕೂಲ್‌ನಲ್ಲಿ ಇಂಗ್ಲಿಷ್ ಭಾಷಾ ಸರ್ಟಿಫಿಕೇಟ್ ಕೋರ್ಸ್. |