ಭಯೋತ್ಪಾದನೆಯು ಇಂದು ರಾಷ್ಟ್ರ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದ್ದರೂ, ವೋಟ್‍ಬ್ಯಾಂಕ್ ರಾಜಕಾರಣದಿಂದಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ಗೆ ಇದರ ವಿರುದ್ಧ ಹೋರಾಡಲಾಗುತ್ತಿಲ್ಲ ಎಂಬುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.ಭಯೋತ್ಪಾದನೆಯಿಂದಾಗಿ ರಾಷ್ಟ್ರದ ಅಭಿವೃದ್ಧಿ ನಿಂತುಬಿಟ್ಟಿದೆ ಎಂದು ಮಹಾರಾಷ್ಟ್ರದ ಮರಾಟ್ವಾಡ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನುಡಿದರು. ಅವರು ಶಿವಸೇನಾ-ಬಿಜೆಪಿ ಅಭ್ಯರ್ಥಿ ನಂದೇಡ್ ಸಾಂಬಾಜಿ ಪವಾರ್ ಪರ ಪ್ರಚಾರಕ್ಕೆ ಆಗಮಿಸಿದ್ದರು." ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಈ ದೇಶದ ಪ್ರಥಮ ಪ್ರಧಾನಿಯಾಗಿರುತ್ತಿದ್ದರೆ ಇಂದು ರೈತರು ಆತ್ಮಹತ್ಯೆಮಾಡಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಅವರು ರೈತರ ನಾಯಕರಾಗಿದ್ದರು" ಎಂದು ಅವರು ರಾಜ್ಯದ ರೈತರ ಆತ್ಮಹತ್ಯಾ ಪ್ರಕರಣವನ್ನುದ್ದೇಶಿಸಿ ನುಡಿದರು.ಕಾಂಗ್ರೆಸ್ ವಿರುದ್ಧ ಪದೇಪದೇ ವಾಗ್ದಾಳಿ ನಡೆಸಿದ ಅವರು ಯುಪಿಎ ಅಸ್ತಿತ್ವದಲ್ಲಿದೆಯೇ ಎಂದು ಪ್ರಶ್ನಿಸಿದರು.ಬಳಿಕ ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ಮಹಾರಾಷ್ಟ್ರ ಮತ್ತು ಕೇಂದ್ರದಲ್ಲಿ ಇದು ಸೀಟು ಹಂಚುವಿಕೆ ಒಪ್ಪಂದ ಮಾಡಿಕೊಂಡಿದ್ದರೆ, ಗುಜರಾತ್ ಹಾಗೂ ಇತೆರೆಡೆಗಳಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಸ್ಫರ್ಧಿಸುತ್ತಿದೆ ಎಂದು ಆರೋಪಿಸಿದರು. ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರ ನೀತಿಗಳು ಗಳಿಗೆಗೊಮ್ಮೆ ಬದಲಾಗುತ್ತಿರುತ್ತದೆ. ಬೆಳಗ್ಗೆ ಹೇಳಿದ್ದ ವಿಷಯಕ್ಕೆ ಸಂಪೂರ್ಣ ವ್ಯತಿರಿಕ್ತ ಹೇಳಿಕೆಗಳು ಸಂಜೆಯ ವೇಳೆಗೆ ಹೊರಬೀಳುತ್ತದೆ ಎಂದು ಅವರು ವ್ಯಂಗ್ಯವಾಡಿದರು.1984 ರ ಸಿಕ್ ನರಮೇಧದ ರೂವಾರಿ ಎಂಬ ಆಪಾದನೆಗೀಡಾಗಿರುವ ಜಗದೀಶ್ ಟೈಟ್ಲರ್ ಅವರನ್ನು ಕಣಕ್ಕಳಿಸಿರುವುದಕ್ಕೆ ಕಾಂಗ್ರೆಸ್ ಭಾರೀಯಾದ ಬೆಲೆ ತೆರಲಿದೆ ಎಂದು ಅವರು ದೂರಿದರು. |