ಮುಂಬೈದಾಳಿಕೋರರಲ್ಲಿ ಸೆರೆ ಸಿಕ್ಕಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್‌ನನ್ನು ಕೊಲೆಗೈಯುವ ಸಂಚು ವಿದೇಶದಲ್ಲಿ ನಡೆದಿದೆಯೆಂಬ ಸುಳಿವನ್ನು ಗುಪ್ತಚರ ಮಾಹಿತಿಗಳು ನೀಡಿವೆ ಎಂಬುದಾಗಿ ಮಹಾರಾಷ್ಟ್ರ ಗೃಹಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.
ಕಸಬ್‌ನನ್ನು ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದಲ್ಲಿ ಗುಂಡುನಿರೋಧಕ ಕಾರಿಡಾರ್‌ಗಳನ್ನು ನಿರ್ಮಿಸುವಂತಹ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಈ ಸಂಚಿನ ಬೆದರಿಕೆ ಕಾರಣ ಎಂದು ಅವರು ದಿ ಟೈಮ್ಸ್ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕಸಬ್‌ನನ್ನು ಮುಗಿಸಿಬಿಡಬೇಕು ಎಂಬ ಸಂಚು ಪಾಕಿಸ್ತಾನದಲ್ಲಿ ಹುಟ್ಟಿಕೊಂಡಿದೆ ಎಂಬುದಾಗಿ ನವೆಂಬರ್ 26ರ ದಾಳಿ ಪ್ರಕರಣದ ತನಿಖೆಯ ನೇತೃತ್ವವಹಿಸಿರುವ ರಾಕೇಶ್ ಮಾರಿಯಾ ಅವರನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಲಷ್ಕರ್-ಇ-ತೋಯ್ಬಾ ಸಂಘಟನೆಯ ಸದಸ್ಯನೆಂದು ಆರೋಪಿಸಲಾಗಿರುವ ಕಸಬ್‌ಗೆ ಲಷ್ಕರ್ ಕುರಿತು ಸೀಮಿತ ಮಾಹಿತಿ ಮಾತ್ರವಿದೆ. "ನಮ್ಮ ಬಳಿ ಅಂಗ ಮಾತ್ರವಿದೆ. ದಾಳಿಯ ಹಿಂದಿರುವ ಸಂಘಟನೆಯ ಮೆದುಳು ಇಲ್ಲ" ಎಂದು ರಾಕೇಶ್ ಹೇಳಿದ್ದಾರೆಂದು ಪತ್ರಿಕೆ ಹೇಳಿದೆ.
ಕಸಬ್‌ನ ವಿಚಾರಣೆಯು ವಿಶ್ವದ ಗಮನವನ್ನು ತನ್ನತ್ತ ಸೆಳೆಯಲಿದೆ ಎಂದೂ ಪತ್ರಿಕೆ ಅಭಿಪ್ರಾಯಿಸಿದೆ.
"ಉಗ್ರವಾದ ದಾಳಿಯ ವೇಳೆ ಸೆರೆಸಿಕ್ಕಿರುವ ಏಕೈಕ ಉಗ್ರ ಕಸಬ್, ಹಾಗೂ ಆತ ಪಾಕಿಸ್ತಾನಿ ಎಂಬುದರಲ್ಲಿ ಎರಡು ಮಾತಿಲ್ಲ. ಆತನನ್ನು ಜೀವಂತ ಸೆರೆ ಹಿಡಿದಿರುವುದು ಲಷ್ಕರೆಗೆ ಬಿಸಿತುಪ್ಪವಾಗಿದ್ದು, ಪಾಕಿಸ್ತಾನವನ್ನು ಕಷ್ಟಕ್ಕೆ ಸಿಲುಕಿಸಿದೆ ಎಂಬುದಾಗಿ ಅಮೆರಿಕ ಚಿಂತಕರ ಚಾವಡಿ ರಾಂಡ್‌ನ ಹಿರಿಯ ರಾಜಕೀಯ ವಿಜ್ಞಾನಿ ಕ್ರಿಸ್ಟಿನ್ ಫೇರ್ ಹೇಳಿದ್ದಾರೆ. |