ರಾಷ್ಟ್ರೀಯಭದ್ರತಾ ಕಾಯ್ದೆಯಡಿ ಜೈಲಿನಲ್ಲಿ ಬಂಧಿಯಾಗಿದ್ದ ಬಿಜೆಪಿ ನಾಯಕ ವರುಣ್ ಗಾಂಧಿ ಅವರನ್ನು ಸುಪ್ರೀಂ ಕೋರ್ಟ್ 15 ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಿದೆ. ಕೋಮುಪ್ರಚೋದಕ ಭಾಷಣ ಮಾಡುವುದಿಲ್ಲ ಎಂಬುದಾಗಿ ವರಣ್ ಗಾಂಧಿ ಮುಚ್ಚಳಿಕೆ ನೀಡಿರುವ ಕಾರಣ ನ್ಯಾಯಾಲಯ ಪೆರೋಲ್ ಮೇಲೆ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದೆ.
ವರುಣ್ ಅವರ ಜಾಮೀನು ಅರ್ಜಿಯನ್ನು 15 ದಿನಗಳ ಬಳಿಕ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ. ಇಟಾ ಜೈಲಿನಲ್ಲಿ ಬಂಧನದಲ್ಲಿರುವ ವರುಣ್ ಗುರುವಾರ ಸಾಯಂಕಾಲದ ವೇಳೆಗೆ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.
ಪಿಲಿಭಿತ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ ಮುಸ್ಲಿಮರ ವಿರುದ್ಧ ಮನಬಂದಂತೆ ಹರಿಹಾಯ್ದರಿವ ಆರೋಪ ಹೊತ್ತು ಜೈಲಿನಲ್ಲಿ ಬಂಧಿಯಾಗಿರುವ ವರುಣ್ ಗಾಂಧಿ ಪ್ರಕರಣದ ವಿಚಾರಣೆಯನ್ನು ಸುಪ್ರಿಂಕೋರ್ಟ್ ಸೋಮವಾರ ಮುಂದೂಡಿತ್ತು.
ಇದೇ ವೇಳೆ ವರುಣ್ ಗಾಂಧಿ ಇನ್ನುಮುಂದೆ ಇಂತಹ ಪ್ರಚೋದನಾಕಾರಿ ಭಾಷಣ ಮಾಡುವುದಿಲ್ಲ ಎಂದು ಬರವಣಿಗೆ ಮುಖಾಂತರ ತಿಳಿಸಿದಲ್ಲಿ ಅವರ ಬಿಡುಗಡೆಗೆ ತಮ್ಮ ಅಭ್ಯಂತರವಿಲ್ಲ ಎಂಬುದಾಗಿ ಉತ್ತರ ಪ್ರದೇಶ ಸರ್ಕಾರದ ಪರ ವಕೀಲ ಹರೀಶ್ ಸಾಳ್ವೆ ನುಡಿದರು. ನ್ಯಾಯಾಲಯವು ಸಲಹೆ ನೀಡಿದರೆ ಮುಚ್ಚಳಿಕೆ ನೀಡಲು ಅಭ್ಯಂತರವಿಲ್ಲ ಎಂಬುದಾಗಿ ವರುಣ್ ವಕೀಲರಾದ ಮುಕುಲ್ ರೋಹಟ್ಗಿ ನ್ಯಾಯಲಕ್ಕೆ ತಿಳಿಸಿದ್ದರು.
ಘಟನೆಯ ಹಿನ್ನೆಲೆ ತನ್ನ ಕ್ಷೇತ್ರ ಪಿಲಿಭಿತ್‌ನಲ್ಲಿ ಚುನಾವಣಾ ಪ್ರಚಾರ ಭಾಷಣ ನಡೆಸಿದ್ದ ವೇಳೆ ವರುಣ್ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚುನಾವಣಾ ಆಯೋಗವು, ವರುಣ್ ಗಾಂಧಿ ವಿರುದ್ಧ ಜಾಮೀನು ರಹಿತ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮತ್ತು ಪಕ್ಷಕ್ಕೆ ನೋಟೀಸು ರವಾನಿಸುವಂತೆ ಉತ್ತರ ಪ್ರದೇಶ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಿದ ಬಳಿಕ ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 ಎ ಪ್ರಕಾರ ಎಫ್ಐಆರ್ ದಾಖಲಾಗಿತ್ತು. ಅಲ್ಲದೆ ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು ಹೇರಲಾಗಿತ್ತು.
ಈ ಮಧ್ಯೆ ವರುಣ್ ಹತ್ಯೆಗೆ ಸಂಚು ಹೂಡಲಾಗಿದೆ ಎಂಬ ಗುಪ್ತಚರ ಮಾಹಿತಿಯನ್ವಯ, ಭದ್ರತಾ ದೃಷ್ಟಿಯಿಂದ ಅರುಣ್ ಅವರನ್ನು ಪಿಲಿಭಿತ್ ಜೈಲಿನಿಂದ ಇಟಾ ಜೈಲಿಗೆ ವರ್ಗಾಯಿಸಲಾಗಿತ್ತು.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವರುಣ್ ಗಾಂಧಿ ಅವರನ್ನು ಬಂಧಿಸಿರುವ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ, ಅವರು ರಾಷ್ಟ್ರದ ಭೀತಿ ಎಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿದಾವಿತ್‌ನಲ್ಲಿ ಹೇಳಿದೆ.
ಬಿಜೆಪಿ ಸಂತಸ ವರುಣ್ ಗಾಂಧಿ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಿರುವ ಸುಪ್ರೀಂ ಕೋರ್ಟ್ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ.
ಅವರು ಈ ಹದಿನೈದು ದಿನಗಳನ್ನು ಪಕ್ಷದ ಕಾರ್ಯಗಳಿಗಾಗಿ ಬಳಸಿಕೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರ ಬಲ್ಬೀರ್ ಪಂಜು ಹೇಳಿದ್ದಾರೆ. |