ಪಶ್ಚಿಮ ದೆಹಲಿ ಕ್ಷೇತ್ರದಿಂದ ಸ್ಫರ್ಧಿಸುತ್ತಿರುವ ಬಿಎಸ್ಪಿಯ ಅಭ್ಯರ್ಥಿ ದೀಪಕ್ ಭಾರದ್ವಾಜ್ ಅವರು ಗುರವಾರ ತಮ್ಮ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಬರೋಬ್ಬರಿ 600 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿದ್ದಾರೆ.
ಪ್ರಸಕ್ತ 15ನೆ ಲೋಕಸಭಾ ಚುನಾವಣೆಗೆ ಇದುವರೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಲ್ಲೇ ಭಾರದ್ವಾದ್ ಅತೀ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ನಾಮಪತ್ರ ಸಲ್ಲಿಸಿದ್ದವರಲ್ಲಿ ಅತಿ ಶ್ರೀಮಂತ ಅಭ್ಯರ್ಥಿ 200 ಕೋಟಿ ಆಸ್ತಿ ಘೋಷಿಸಿದ್ದರು.
ಇಷ್ಟೊಂದು ಅಷ್ಟೈಶ್ವರ್ಯ ಹೊಂದಿರುವ ಈ ಅಭ್ಯರ್ಥಿ, ಕುತೂಹಲ ಎಂಬಂತೆ ತನ್ನ ತೋಟದ ಮನೆಯಿಂದ ರಾಮ್ಪುರ ಚುನಾವಣಾ ಕಚೇರಿಗೆ ಟ್ರಾಕ್ಟರ್‌ನಲ್ಲಿ ತನ್ನ ಅಭಿಮಾನಿಗಳೊಂದಿಗೆ ಬಂದರು.
58ರ ಹರೆಯದ ಭಾರದ್ವಾಜ್, ಮಾಯವತಿ ಪಕ್ಷದ ಅಭ್ಯರ್ಥಿಯಾಗಿದ್ದು, ಇವರು ರಿಯಲ್ ಎಸ್ಟೇಟ್ ವ್ಯವಹಾರವನ್ನು ಹೊಂದಿದ್ದಾರೆ. ದ್ವಾರಕದಲ್ಲಿ ಒಂದು ಶಾಲೆ ಇದೆ. ಇದಲ್ಲದೆ ಪಶ್ಚಿಮ ದೆಹಲಿಯ ದ್ವಾರಕ ಹಾಗೂ ದಾಂಶಾಜದಲ್ಲಿ ಇನ್ನೂ ಎರಡು ಶಾಲೆಗಳನ್ನು ತೆರೆಯುವ ಯೋಜನೆ ಹೊಂದಿದ್ದಾರೆ.
ಇದಲ್ಲದೆ, ಹರಿದ್ವಾರದಲ್ಲಿ ದೀಪಗಂಗಾ ಎಂಬ ಟೌನ್‌ಶಿಫ್ ಅನ್ನೂ ಅವರು ಹೊಂದಿದ್ದಾರೆ. ಜತೆಗೆ ದೆಹಲಿ-ಗುರ್ಗಾಂವ್ ಎಕ್ಸ್‌ಪ್ರೆಸ್ ವೇಯಲ್ಲಿ ನಿತೇಶ್‌ಪಂಡ್ ಹೋಟೇಲ್ ಸಮುಚ್ಚಯವನ್ನೂ ಅವರು ಹೊಂದಿದ್ದಾರೆ.
ಇವರು ಪಶ್ಚಿಮ ದೆಹಲಿಯ ಲಾಜ್ವಂತಿ ಗಾರ್ಡನ್ ನಿವಾಸಿಯಾಗಿದ್ದಾರೆ. |