ಅಂಜಲಿ ವಾಘ್ಮೋರೆ ಅವರನ್ನು ಪದಚ್ಯುತಗೊಳಿಸಿರುವ ಹಿನ್ನೆಲೆಯಲ್ಲಿ ಹಿರಿಯ ವಕೀಲರಾಗಿರುವ ಅಬ್ಬಾಸ್ ಖಾಜ್ಮಿ ಅವರನ್ನು ಕಸಬ್ ಪರ ವಕೀಲರನ್ನಾಗಿ ಗುರುವಾರ ನೇಮಿಸಲಾಗಿದೆ.
ಮುಂಬೈದಾಳಿಯ ವೇಳೆ ಬದುಕುಳಿದಿರುವ ಏಕೈಕ ಉಗ್ರನಿಗೆ ಅಬ್ಬಾಸ್ ಅವರನ್ನು ವಕೀಲರನ್ನಾಗಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್. ತಹಿಲ್ಯಾನಿ ನೇಮಿಸಿದ್ದಾರೆ. ಈ ಹಿಂದೆ ಅಂಜಲಿ ವಾಘ್ಮೋರೆ ಎಂಬ ವಕೀಲರನ್ನು ನೇಮಿಸಲಾಗಿತ್ತಾದರೂ, ವೃತ್ತಿಧರ್ಮಕ್ಕೆ ಚ್ಯುತಿ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಗೊಳಿಸಲಾಗಿತ್ತು.
ಈ ಹಿಂದೆ ಕೆ.ಪಿ. ಪವಾರ್ ಅವರನ್ನು ನೇಮಿಸಲಾಗಿದ್ದು ಅವರ ನೇಮಕಾತಿ ಮುಂದುವರಿಯಲಿದೆ ಮತ್ತು ಅವರು ಖಾಜ್ಮಿ ಅವರ ಸಹಾಯಕರಾಗಿ ಮುಂದುವರಿಯಲಿದ್ದಾರೆ.
ವಿಚಾರಣೆಯ ಎರಡನೆ ದಿನವಾದ ಗುರುವಾರ ಕಸಬ್ ನ್ಯಾಯಾಲಯದಲ್ಲಿ ಹಾಜರಾಗಿದ್ದಾನೆ. ತನಗೆ ಪಾಕಿಸ್ತಾನ ವಕೀಲರ ನೆರವು ಬೇಕು ಎಂಬ ಆತನ ಕೋರಿಕೆಯನ್ನು ನ್ಯಾಯಾಧೀಶರು ತಳ್ಳಿಹಾಕಿದ್ದಾರೆ. |