ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರ ವಿರುದ್ಧ ಉದ್ರೇಕಕಾರಿ ಭಾಷಣ ಮಾಡಿದ ಆರೋಪಕ್ಕಾಗಿ ಬಂಧಿಯಾಗಿದ್ದ ವರುಣ್ ಗಾಂಧಿ ಅವರು ಸುಪ್ರೀಂ ಕೋರ್ಟ್ ಆದೇಶದಂತೆ ಪೆರೋಲ್ ಮೇಲೆ ಬಿಡುಗಡೆಯಾಗಿದ್ದು, ಸುಮಾರು 20 ದಿನಗಳ ಜೈಲುವಾಸದ ಬಳಿಕ ಗುರುವಾರ ಹೊರಬಂದಿದ್ದಾರೆ.
ಸಾಯಂಕಾಲ ಆರೂವರೆ ವೇಳೆಗೆ ಬಿಡುಗಡೆಗೊಂಡ ವರುಣ್ ಗಾಂಧಿಗೆ ಪಕ್ಷದ ಕಾರ್ಯಕರ್ತರು ವೀರೋಚಿತ ಸ್ವಾಗತ ನೀಡಿದರು. ಅವರ ತಾಯಿ ಮನೇಕಾ ಗಾಂಧಿ ಅವರೂ ಜೈಲಿಗೆ ತೆರಳಿದ್ದು ಪುತ್ರನನ್ನು ಕರೆದೊಯ್ದರು.
ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧನಕ್ಕೀಡಾಗಿದ್ದ ವರುಣ್ ಗಾಂಧಿ ಅವರು ಕೋಮುಪ್ರಚೋದಕ ಭಾಷಣ ಮೂಡುವುದಿಲ್ಲ ಎಂಬುದಾಗಿ ಮುಚ್ಚಳಿಕೆ ಬರೆದು ಕೊಟ್ಟಿರುವ ಆಧಾರದಲ್ಲಿ ಅವರನ್ನು 15 ದಿನಗಳಿಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಅವರ ಜಾಮೀನು ಅರ್ಜಿಯ ಇತ್ಯರ್ಥವು 15ದಿನಗಳ ಬಳಿಕ ನಡೆಯಲಿದೆ.
ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವರುಣ್ ಎಪ್ರಿಲ್ 21ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಹದಿನೈದು ದಿನಗಳು ಅವರು ಪಕ್ಷದ ಕಾರ್ಯಗಳನ್ನು ಮಾಡಲಿದ್ದಾರೆ ಎಂದು ಹೇಳಲಾಗಿದೆ. |