ಹದಿನೈದನೆ ಲೋಕಸಭಾ ಚುನಾವಣೆಯ ಪ್ರಥಮ ಹಂತದ ಮತದಾನ ಗುರುವಾರ ನಡೆದಿದ್ದು, ನಕ್ಸಲ್ ಪೀಡಿತ ನಾಲ್ಕು ರಾಜ್ಯಗಳನ್ನು ಹೊರತು ಪಡಿಸಿದರೆ ಮಿಕ್ಕಂತೆ ಉಳಿದೆಡೆ ಬಹುತೇಕ ಶಾಂತಿಯುತ ಮತದಾನ ನಡೆದಿದೆ. ಒಟ್ಟಾರೆಯಾಗಿ ಶೇ.60ರಷ್ಟು ಮತದಾನವಾಗಿದೆ ಎಂದು ಉಪ ಚುನಾವಣಾಯುಕ್ತ ಆರ್. ಬಾಲಕೃಷ್ಣನ್ ಅವರು ತಿಳಿಸಿದ್ದಾರೆ. ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಗರಿಷ್ಠ ಶೇ.86ರಷ್ಟು ಮತದಾನವಾಗಿದ್ದರೆ, ಬಿಹಾರದಲ್ಲಿ ಕನಿಷ್ಠ ಶೇ.46ರಷ್ಟು ಮತದಾನವಾಗಿದೆ ಎಂದು ವರದಿಗಳು ತಿಳಿಸಿವೆ.ನಕ್ಸಲ್ ಪೀಡಿತ ರಾಜ್ಯಗಳಾದ ಒರಿಸ್ಸಾ, ಜಾರ್ಖಂಡ್, ಛತ್ತೀಸ್‌ಗಢ ಹಾಗೂ ಬಿಹಾರದಲ್ಲಿ ನಕ್ಸಲರು ದಾಳಿ ನಡೆಸಿ ಚುನಾವಣಾ ಪ್ರಕ್ರಿಯೆಗೆ ಅಡ್ಡಿಪಡಿಸಿದ್ದು, ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಗಳು, ಚುನಾವಣಾಧಿಕಾರಿಗಳು ಹಾಗೂ ಇತರರು ಸೇರಿದಂತೆ ಒಟ್ಟು 18 ಮಂದಿ ಸಾವನ್ನಪ್ಪಿದ್ದಾರೆ. ಮಿಕ್ಕಂತೆ ಉಳಿದೆಡೆ ಬಹುತೇಕ ಶಾಂತಿಯುತ ಮತದಾನವಾಗಿದೆ.ಉತ್ತರ ಪ್ರದೇಶದಲ್ಲಿ ಶೇ.48, ನಾಗಾಲ್ಯಾಂಡಿನಲ್ಲಿ ಶೇ.84, ಆಂಧ್ರಪ್ರದೇಶದಲ್ಲಿ ಶೇ.65, ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಶೇ.62, ಮಹಾರಾಷ್ಟ್ರದಲ್ಲಿ ಶೇ.54, ಛತ್ತೀಸ್‌ಗಢದಲ್ಲಿ ಶೇ.51, ಬಿಹಾರದಲ್ಲಿ ಶೇ.46, ಲಕ್ಷದ್ವೀಪದಲ್ಲಿ ಶೇ.86, ಮಣಿಪುರದಲ್ಲಿ ಶೇ.66, ಮೇಘಾಲಯದಲ್ಲಿ ಶೇ.68, ಮಿಜೋರಾಂನಲ್ಲಿ ಶೇ.52, ನಾಗಾಲ್ಯಾಂಡಿನಲ್ಲಿ ಶೇ.84, ಅಂಡಮಾನ್‌ನಲ್ಲಿ ಶೇ.62, ಒರಿಸ್ಸಾದಲ್ಲಿ ಶೇ.53, ಜಾರ್ಖಂಡ್‌ನಲ್ಲಿ ಶೇ.50ರಷ್ಟು ಮತದಾನವಾಗಿದೆ ಎಂದು ಅಂದಾಜಿಸಲಾಗಿದೆ.ಗುರವಾರದ ಮೊದಲ ಹಂತದ ಚುನಾವಣೆಯಲ್ಲಿ 124 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 122 ಮಹಿಳೆಯರು ಸೇರಿದಂತೆ ಒಟ್ಟು 1,715 ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ನಡೆದಿದೆ. ನಕ್ಸಲ್ ದಾಳಿ ನಡೆದ ಕೆಲವು ಕ್ಷೇತ್ರಗಳಲ್ಲಿ ಮರುಮತದಾನ ನಡೆಯಲಿದೆ. |