ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ನೂರು ದಿವಸಗಳೊಳಗಾಗಿ ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದು ಅಭಿವೃದ್ಧಿಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು ಎಂದು ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಪುನರುಚ್ಚರಿಸಿದ್ದಾರೆ." ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಈ ಹಣದ ಮೇಲಿನ ತೆರಿಗೆ ಮಾತ್ರ ನಷ್ಟವಲ್ಲ. ಈ ಎಲ್ಲ ಹಣವನ್ನು ನಾವು ಕಳೆದುಕೊಳ್ಳುತ್ತೇವೆ. ಇದು ಅತ್ಯಂತ ಅಪಾಯಕಾರಿ" ಎಂದು ಆಡ್ವಾಣಿ ಮುಂಬೈಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಸ್ವಿಸ್ ಬ್ಯಾಂಕುಗಳು ಸೇರಿದಂತೆ ವಿದೇಶಿ ಬ್ಯಾಂಕುಗಳಲ್ಲಿ ಕೊಳೆಯುತ್ತಿರುವ ಭಾರತೀಯ ಹಣದ ಕುರಿತು ಸಂಪೂರ್ಣ ಮಾಹಿತಿಗಾಗಿ ಪಕ್ಷವು ನೇಮಿಸಿರುವ ಕಾರ್ಯಪಡೆಯನ್ನು ಉಲ್ಲೇಖಿಸಿ ಆಡ್ವಾಣಿ ಮೇಲಿನಂತೆ ನುಡಿದರು." ಈ ಕುರಿತು ಜಿ20 ರಾಷ್ಟ್ರಗಳ ಉಪಕ್ರಮದ ಕುರಿತು ಭಾರತವು ಮೌನವಹಿಸಬಾರದು. ಜನತೆಯು ಜನಾದೇಶ ನೀಡಿದಲ್ಲಿ ನಾವು ಈ ವಿಚಾರದಲ್ಲಿ ಮುನ್ನಡೆಯಲಿದ್ದೇವೆ" ಎಂದು ಕೇಸರಿ ಪಾಳಯದ ನಾಯಕ ನುಡಿದರು.ವಿಶ್ವಾದ್ಯಂತ ಇಂತಹ ಸುಮಾರು 70 ತೆರಿಗೆ ಸ್ವರ್ಗಗಳಿದ್ದು, ಇಂತಕಡೆಗಳಲ್ಲಿ ಅಕ್ರಮ ಹಣವನ್ನು ಠೇವಣಿ ಇರಿಸಲಾಗುತ್ತದೆ. ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯ ಹಣದ ಮೊತ್ತವು ಸುಮಾರು 25,000 ಲಕ್ಷ ಕೋಟಿಯಿಂದ 75,000 ಲಕ್ಷ ಕೋಟಿ ರೂಪಾಯಿಗಳಾಗಿರಬಹುದೆಂದು ಕಾರ್ಯಪಡೆ ಅಂದಾಜಿಸಿರುವುದಾಗಿ ಅವರು ತಿಳಿಸಿದ್ದಾರೆ.ಈ ಕುರಿತು ರಾಷ್ಟ್ರೀಯ ಒಮ್ಮತಕ್ಕೆ ಅವರು ಕರೆ ನೀಡಿದರು. ಇದನ್ನು ಪಕ್ಷದ ಚುನಾವಣಾ ಪ್ರಚಾರದ ತಂತ್ರ ಎಂಬುದನ್ನು ನಿರಾಕರಿಸಿದ ಅವರು, ತಾನು ಈ ವಿಚಾರವನ್ನು 2008ರ ಫೆಬ್ರವರಿಯಲ್ಲೇ ಎತ್ತಿದ್ದೆ. ಆಗ ಚುನಾವಣೆಯ ಸೂಚನೆಗಳು ಇರಲಿಲ್ಲ ಎಂದು ನುಡಿದರು. ನಾವು ಈ ವಿಚಾರವನ್ನು ಸಮ್ಮನೆ ಎತ್ತುತ್ತಿಲ್ಲ, ಬದಲಿಗೆ ಗಂಭೀರವಾಗಿ ಈ ವಿಚಾರವನ್ನು ಪರಿಗಣಿಸುತ್ತಿರುವುದಾಗಿ ನುಡಿದರು.ಈ ಕುರಿತು ಗುಜರಾತಿನಲ್ಲಿ ನಡೆಸಿರುವ ಜನಮತದಲ್ಲಿ ಶೇ.99ರಷ್ಟು ಮಂದಿ ಈ ವಿಚಾರದ ಕುರಿತು ಕಠಿಣವಾಗಿ ಕ್ರಮಕೈಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. |