ತನ್ನ ಶಿಕ್ಷಕರು ನೀಡಿದ ಶಿಕ್ಷೆಯನ್ನು ಸಹಿಸಲಾರದ ಪುಟ್ಟ ಬಾಲಕಿಯೋರ್ವಳು ಸಾವನ್ನಪ್ಪಿರುವ ದಾರುಣ ಘಟನೆ ದೆಹಲಿಯಲ್ಲಿ ಸಂಭವಿಸಿದೆ.
ಎಬಿಸಿಡಿ ಹೇಳಲು ಬರದ ಶಾನ್ನೂ ಎಂಬ ಬಾಲಕಿಗೆ ಶಿಕ್ಷಕಿ ಮಂಜು ಎಂಬವರು ಬುಧವಾರ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ್ದರು. ಸುಮಾರು ಎರಡು ಗಂಟೆಗೂ ಅಧಿಕ ಕಾಲ ಬಿಸಿಲಿನಲ್ಲಿ ನಿಲ್ಲಿಸಿದ ಕಾರಣ ಉರಿಬಿಸಿಲು ತಡೆಯಲಾಗದ ಬಾಲಕಿ ಕೋಮಾಗೆ ಜಾರಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆ ಶುಕ್ರವಾರ ಸಾವನ್ನಪ್ಪಿದ್ದಾಳೆ.
ಉತ್ತರ ದೆಹಲಿಯ ನರೇಲ ಎಂಬಲ್ಲಿರುವ ದೆಹಲಿ ಮಹಾನಗರ ಪಾಲಿಕೆಯ ಶಾಲೆಯಲ್ಲಿ ಈ ಘಟನೆ ಸಂಭವಿಸಿದೆ. ಹನ್ನೊಂದರ ಹರೆಯದ ಬಾಲಕಿಯನ್ನು ಲೋಕನಾಯಕ್ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದರೂ ಪ್ರಯೋಜನವಾಗಿಲ್ಲ.
ಆದರೆ ಈ ಕುರಿತು ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ. "ನಾವಿನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ. ವೈದ್ಯಕೀಯ ವರದಿಗೆ ಕಾಯುತ್ತಿದ್ದೇವೆ" ಎಂದು ದೆಹಲಿ ಪೊಲೀಸ್ ಉಪಾಯುಕ್ತ ಅತುಲ್ ಕತಿಯಾರ್ ತಿಳಿಸಿದ್ದಾರೆ. ದೆಹಲಿ ನಗರಪಾಲಿಕೆಯು ವಿದ್ಯಾರ್ಥಿಗೆ ಬಿಸಿಲಿನಲ್ಲಿ ನೀಡುವ ಶಿಕ್ಷೆ ವಿಧಿಸಿರುವ ಶಿಕ್ಷಕಿಯನ್ನು ಅಮಾನತುಗೊಳಿಸಿದೆ.
ಶಿಕ್ಷಕಿ ಮಂಜು ಎಂಬಾಕೆ ಎಬಿಸಿಡಿ ಹೇಳಲು ಬಾರದ ಬಾಲಕಿಯ ತಲೆಯನ್ನು ಮೇಜಿಗೆ ಅಪ್ಪಳಿಸಿ ಬಳಿಕ ಬಿಸಿಲಿನಲ್ಲಿ ನಿಲ್ಲುವ ಶಿಕ್ಷೆ ವಿಧಿಸಿದ್ದಾಗಿ ಹೇಳಲಾಗಿದೆ. ಬಿಸಿಲು ತಡೆಯಲಾಗದ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಬಾಲಕಿಯ ಅಕ್ಕನೂ ಅದೇ ಶಾಲೆಯಲ್ಲಿ ಕಲಿಯುತ್ತಿದ್ದು, ತಲೆತಿರುಗಿ ಬಿದ್ದಿರುವ ತನ್ನ ತಂಗಿಯನ್ನು ಕಂಡು, ಆಕೆ ಈ ವಿಚಾರವನ್ನು ತನ್ನ ತಾಯಿಗೆ ತಿಳಿಸಿದ್ದಳು. ತಾಯಿ ರಿಹ್ನಾ ಆಕೆಯನ್ನು ತಕ್ಷಣವೇ ಮಹರ್ಷಿ ವಾಲ್ಮಿಕಿ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಂದ ಆಕೆಯನ್ನು ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಶಾಲಾಡಳಿತವು ತಪ್ಪಿತಸ್ಥ ಶಿಕ್ಷಕಿ ಹಾಗೂ ಶಾಲಾ ಪ್ರಾಂಶುಪಾಲರನ್ನು ಅಮಾನತ್ತುಗೊಳಿಸಿದ್ದರೂ, ಬಾಲಕಿ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದಳು ಮತ್ತು ಆಕೆ ದಿನನಿತ್ಯ ಶಾಲೆಗೆ ಬರುತ್ತಿರಲಿಲ್ಲ, ಕೆಲವು ದಿನಗಳು ಶಾಲೆಗೆ ಗೈರುಹಾಜರಾಗುತ್ತಿದ್ದಳು ಎಂದು ಹೇಳಿದೆ. ಅಲ್ಲದೆ, ಆಕೆಗೆ ಬುಧವಾರವೂ ಫಿಟ್ಸ್ ಬಂದು ಬಿದ್ದಿದ್ದು ಈ ವಿಷಯವನ್ನು ಆಕೆಯ ಮನೆಗೆ ತಿಳಿಸಲಾಗಿತ್ತು ಎಂದು ಹೇಳಿದೆ.
ಈ ಮಧ್ಯೆ, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ಹೇಳಿದ್ದಾರೆ.
|