ಸುಪ್ರೀಂಕೋರ್ಟ್ ನೀಡಿರುವ ಪೆರೋಲ್ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಬಿಜೆಪಿಯ ಯುವ ನೇತಾರ ವರುಣ್ ಗಾಂಧಿ, "ರಾಜಕೀಯದಲ್ಲಿ ಹಿಂಸಾಚಾರದಲ್ಲಿ ತನಗೆ ನಂಬುಗೆ ಇಲ್ಲ, ಆದರೆ, ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಧ್ವನಿ ಎತ್ತುವುದನ್ನು ತಾನು ನಿಲ್ಲಿಸುವುದಿಲ್ಲ" ಎಂದು ಹೇಳಿದ್ದಾರೆ.
ನೆರೆಯ ದೇಶಗಳಿಂದ ರಾಷ್ಟ್ರವು ಎದುರಿಸುತ್ತಿರುವ ಭಯೋತ್ಪಾದನಾ ಭೀತಿಯನ್ನು ಎದುರಿಸಲು ರಾಷ್ಟ್ರದ ಜನತೆ ಒಗ್ಗಟ್ಟಾಗುವ ಅವಶ್ಯಕತೆ ಇದೆ ಎಂದು ಅವರು ಮಾಧ್ಯಮಗಳಿಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ಅಭಿಪ್ರಾಯಿಸಿದ್ದಾರೆ.
ಭಯೋತ್ಪಾದನಾ ಭೀತಿಯನ್ನು ಒಗ್ಗಟ್ಟಾಗಿ ಎದುರಿಸುವ ಅವಶ್ಯಕತೆ ಇದೆ. ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಮತ್ತು "ನಾನಂತೂ ರಾಷ್ಟ್ರವಿರೋಧಿ ಶಕ್ತಿಗಳ ಎದುರು ಧ್ವನಿ ಎತ್ತುವುದನ್ನು ನಿಲ್ಲಿಸಲಾರೆ" ಎಂದು ವರುಣ್ ಗಾಂಧಿ ಹೇಳಿದ್ದಾರೆ.
ತನ್ನ ಕ್ಷೇತ್ರ ಪಿಲಿಭಿತ್‌ನಲ್ಲಿ ಚುನಾವಣಾ ಭಾಷಣ ಮಾಡುವ ವೇಳೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪ ಹೊತ್ತ ವರುಣ್ ಗಾಂಧಿ, ತತ್ಪರಿಣಾಮ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಯಾಗಿದ್ದರು. ಇವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿತ್ತು.
ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗುವಂತಹ ಮಾತುಗಳನ್ನು ಆಡುವುದಿಲ್ಲ ಎಂಬ ಮುಚ್ಚಳಿಕೆಯ ಆಧಾರದಲ್ಲಿ ನ್ಯಾಯಾಲಯ ಪೆರೋಲ್ ಮೇಲೆ ಬಿಡುಗಡೆಗೆ ಅನುಮತಿ ನೀಡಿದೆ. |