ಆಡ್ವಾಣಿ ಅವರನ್ನು ಆರೆಸ್ಸೆಸ್ ಗುಲಾಮ ಎಂದಿರುವ ಸೋನಿಯಾಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿಯು, ಪ್ರಧಾನಿ ಮನಮೋಹನ್ ಸಿಂಗ್ ಸೋನಿಯಾ ಗುಲಾಮ ಎಂದು ಹೇಳಿದೆ. ತುಮಕೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾದ್ದಾಳಿ ನಡೆಸಿದ್ದು, ಕಾಂಗ್ರೆಸ್ ಮುಂದೆ ಆರು ಪ್ರಶ್ನೆಗಳನ್ನು ಇರಿಸಿದರು." ಆಡ್ವಾಣಿ ಅವರು ಆರೆಸ್ಸೆಸ್ ತತ್ವ ಸಿದ್ಧಾಂತಗಳ ಗುಲಾಮರು" ಎಂದು ಹೇಳಿದ ಸುರೇಶ್ ಕುಮಾರ್, ಸ್ವಾತಂತ್ರ ಸಿಕ್ಕ ಬಳಿ ಕಾಂಗ್ರೆಸ್ ವಿಸರ್ಜಿಸಿ ಎಂಬುದಾಗಿ ಗಾಂಧೀಜಿ ಯಾವ ಪಕ್ಷಕ್ಕೆ ಹೇಳಿದ್ದು ಯಾವ ಪಕ್ಷಕ್ಕೆ ಎಂದು ಪ್ರಶ್ನಿಸಿದರು.1971 ರಲ್ಲಿ ಗರೀಬಿ ಹಠಾವೋ ಎಂದು ಘೋಷಿಸಿ ಬಡವರು ಬಡವರಾಗಿಯೇ ಉಳಿಯುವಂತೆ ಮಾಡಿದ್ದು ಯಾವಪಕ್ಷ?1975 ರಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಿ ತುರ್ತು ಪರಿಸ್ಥಿತಿ ಹೇರಿ ಜಯಪ್ರಕಾಶ್ ನಾರಾಯಣ ಅವರನ್ನು ಜೈಲಿಗೆ ತಳ್ಳಿದ ಪಕ್ಷ ಯಾವುದು?1968 ರಲ್ಲೇ ವಿವಾಹವಾದರೂ 1983ರ ವರೆಗೂ ದೇಶದ ಪೌರತ್ವವನ್ನು ಸ್ವೀಕರಿಸದ ಮಹಿಳೆ ಯಾವ ಪಕ್ಷದ ನಾಯಕಿ?ಹಿರಿಯ ನಾಯಕ ವೀರೇಂದ್ರ ಪಾಟೀಲರೂ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮುಖ್ಯಮಂತ್ರಿಗಳನ್ನು ಜೀತದಾಳುಗಳಂತೆ ನಡೆಸಿಕೊಂಡು, ಅವರನ್ನೂ ಕೇಳದೆ ಏಕಾಏಕಿ ಪಕ್ಷದ ಹೆಸರಿನ ಮುಂದೆ ತಮ್ಮ ಹೆಸರನ್ನು ಸೇರಿಸಿಕೊಂಡವರು ಯಾರು? ಕರ್ನಾಟಕ ಶಾಸಕಾಂಗ ಪಕ್ಷದ ಸಭೆ ಕರೆಯದೇ ರಾಜಕೀಯ ಕಾರಣಗಳಿಗಾಗಿ ಇಲ್ಲಿನ ವಿರೋಧ ಪಕ್ಷದ ನಾಯಕರನ್ನು ಬದಲಿಸಲು ಹೊರಟಿರುವ ಸರ್ವಾಧಿಕಾರಿ ಪಕ್ಷ ಯಾವುದು?ಸಂಸತ್ ಭವನದ ಮೇಲೆ ದಾಳಿ ಮಾಡಿ ಮರಣ ದಂಡನೆಗೀಡಾಗಿರುವ ಅಫ್ಜಲ್ ಗುರುವನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಇದುವರೆಗೂ ಗಲ್ಲಿಗೇರಿಸದಿರುವ ಪಕ್ಷ ಯಾವುದು ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟರು.ಬಿಜೆಪಿಯ ಈ ಪ್ರಶ್ನೆಗಳಿಗೆ ಸೋನಿಯಾ ಅಥವಾ ಕಾಂಗ್ರೆಸ್‌ನ ಯಾವುದೇ ನಾಯಕ ಉತ್ತರಿಸಲಿ. ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಒಯ್ಯದೆ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ವರಿಷ್ಠರಿಗೆ ನರೇಂದ್ರ ಮೋದಿಯವರ ಭಾಷಣ ಸ್ಫೂರ್ತಿ ನೀಡಿರಬೇಕು ಎಂದು ಬಿಜೆಪಿ ಮುಖಂಡ ವ್ಯಂಗ್ಯವಾಡಿದರು. |