ಭಾರತದ ಕದನವಿರಾಮ ವಿನಂತಿಯನ್ನು ಶ್ರೀಲಂಕಾ ಪರಿಗಣಿಸದಿದ್ದರೆ, ಆ ರಾಷ್ಟ್ರದೊಂದಿಗಿನ ಸಂಬಂಧವನ್ನು ಮುರಿದುಕೊಳ್ಳಬೇಕು ಎಂದು ತಮಿಳ್ನಾಡು ಮುಖ್ಯಮಂತ್ರಿ ಕರುಣಾ ನಿಧಿ ಹೇಳಿದ್ದಾರೆ.
ಶ್ರೀಲಂಕಾದ ತಮಿಳರ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಮೆದು ಧೋರಣೆ ಅನುಸರಿಸುತ್ತಿದ್ದಾರೆ ಎಂದು ತಮಿಳು ರಾಷ್ಟ್ರೀಯ ಪಕ್ಷಗಳ ಟೀಕೆ ಎದುರಿಸುತ್ತಿರುವ ಕರುಣಾನಿಧಿ, ಈ ಕುರಿತು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ.
ಕರುಣಾನಿಧಿಯವರ ರಾಜಕೀಯ ವೈರಿಯಾಗಿರುವ ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ಅವರು ಕೇಂದ್ರ ಹಾಗೂ ಕರುಣಾನಿಧಿಯವರು ಲಂಕಾದಲ್ಲಿ ನಡೆಯುತ್ತಿರುವ ತಮಿಳರ ನರಮೇಧವನ್ನು ತಪ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದ್ದರು. ಎಐಎಡಿಎಂಕೆ ಮಿತ್ರ ಪಕ್ಷಗಳಾದ ಎಂಡಿಎಂಕೆ ಮತ್ತು ಪಿಎಂಕೆಗಳೂ ಸಹ ಲಂಕಾ ತಮಿಳರ ಬೆಂಬಲಕ್ಕಾಗಿ ಧ್ವನಿ ಎತ್ತಿವೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕರುಣಾನಿಧಿ ಅವರು, "ಇಂದು ರಾತ್ರಿಯೊಳಗೆ ಲಂಕಾ ಸರ್ಕಾರ ಕದನ ವಿರಾಮ ಘೋಷಿಸದೇ ಇದ್ದರೆ, ಭಾರತವು ರಾಜತಾಂತ್ರಿಕ ಸಂಬಂಧಗಳು ಸೇರಿದಂತೆ ಲಂಕಾದೊಂದಿಗಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಬೇಕು" ಎಂದು ಹೇಳಿದ್ದಾರೆ.
ಇದಕ್ಕೂ ಮುಂಚಿತವಾಗಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, "ಶ್ರೀಲಂಕಾದ ವ್ಯವಹಾರಗಳಲ್ಲಿ ತಮಿಳರಿಗೆ ಸಮಾನ ಸ್ಥಾನಮಾನಗಳನ್ನು ನೀಡಬೇಕು. ತಮಿಳರನ್ನು ಸಮಾನವಾಗಿ ನಡೆಸಿಕೊಳ್ಳದೇ ಇದ್ದರೆ ಇತಿಹಾಸವು ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಷೆ ಅವರನ್ನು ಕ್ಷಮಿಸದು" ಎಂದು ಅವರು ಹೇಳಿದರು |