ಸಿಖ್ ಸಮುದಾಯದ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಟಿಕೆಟ್ ವಂಚಿತರಾಗಿರುವ ಸಜ್ಜನ್ ಕುಮಾರ್ ಅವರ ಸಹೋದರನಿಗೆ ದಕ್ಷಿಣ ದೆಹಲಿ ಕ್ಷೇತ್ರದಿಂದ ಸ್ಫರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ.
ಸಿಖ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಟೈಟ್ಲರ್ ಅವರಿಗೆ ಸಿಬಿಐ ಕ್ಲೀನ್ ಚಿಟ್ ಕೊಟ್ಟಿರುವುದರ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ಸಿಖ್ ಸಮುದಾಯ ತೀವ್ರ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ, ಸಿಖ್ ಮತಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಅವರ ಅಭ್ಯರ್ಥಿತನವನ್ನು ಹಿಂತೆಗೆದುಕೊಂಡಿದ್ದರೂ, ಅವರ ನಾಯಕತ್ವವನ್ನು ಲಘುವಾಗಿ ಪರಿಗಣಿಸಲಾಗದು ಎಂಬ ಹಿನ್ನೆಲೆಯಲ್ಲಿ, ಅವರ ಸಹೋದರನಿಗೆ ಟಿಕೆಟ್ ನೀಡಿರುವ ಕಾಂಗ್ರೆಸ್ 'ಡ್ಯಾಮೇಜ್ ಕಂಟ್ರೋಲ್'ಗೆ ಮುಂದಾಗಿದೆ.
ಸಿಖ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಖ್ ಭಾವನೆಗಳು ಹಾಗೂ ಕಾಂಗ್ರೆಸ್ ಭಾವನೆಗಳ ಅರಿವಿರುವ ಕಾರಣ ಸಜ್ಜನ್ ಕುಮಾರ್ ತನ್ನ ಪುತ್ರ ಜಗ್ಗರ್ವೇಷ್ ಮತ್ತು ಸಹೋದರ ರಮೇಶ್ ಕುಮಾರ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಮೇಶ್ ಕುಮಾರ್ ಅವರು ವಾಯುವ್ಯ ದೆಹಲಿಯ ಶಾಬಾದ್ ದೌಲತ್ಪುರ ವಿಧಾನಸಭಾ ಸ್ಥಾನದಿಂದ 1998ರಲ್ಲಿ ಆಯ್ಕೆಯಾಗಿದ್ದರು. ನಂತರದ 2003ರ ಚುನಾವಣೆಯಲ್ಲಿ ಅವರು ಸೋಲನ್ನಪ್ಪಿದ್ದರು. ಕಳೆದಬಾರಿಯ ದೆಹಲಿ ವಿಧಾನಸಭಾ ಚುನಾವಣೆಯ ವೇಳೆ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. |