ದ್ವೇಷಭಾಷಣ ಆರೋಪದ ಹಿನ್ನೆಲೆಯಲ್ಲಿ ಎನ್ಎಸ್ಎ ಕಾಯ್ದೆಯಡಿ ಬಂಧಕನಕ್ಕೀಡಾಗಿದ್ದ ವೇಳೆ ತನಗೆ ಬೆಂಬಲ ನೀಡಿರುವುದಕ್ಕಾಗಿ ಬಿಜೆಪಿಯ ಯುವ ನೇತಾರ ಪಕ್ಷದ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಆಡ್ವಾಣಿ ನಿವಾಸಕ್ಕೆ ತೆರಳಿದ ವರುಣ್ ಹಿರಿಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಸರಿಸುಮಾರು ಒಂದು ಗಂಟೆ ಕಾಲದ ಮಾತುಕತೆಯವೇಳೆ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪಕ್ಷವು ತನ್ನ ಪರವಾಗಿ ನಿಂತಿರುವುದಕ್ಕೆ ವರುಣ್ ಕೃತಜ್ಞತೆ ಸಲ್ಲಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.
ಈ ವೇಳೆ ವರುಣ್ ಗಾಂಧಿ ಅವರ ಪ್ರಚಾರ ಯೋಜನೆಗಳ ಕುರಿತು ವಿಚಾರಿಸಿದ ಆಡ್ವಾಣಿ ಅವರು ಎಚ್ಚರ ವಹಿಸುವಂತೆ ಸಲಹೆ ನೀಡಿದ್ದು, ವರುಣ್ ತಾನು ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆನ್ನಲಾಗಿದೆ. ಇದೇ ವೇಳೆ ಇಟಾ ಜೈಲಿನ ಅನುಭವನನ್ನು ಕೇಳಿ ತಿಳಿದುಕೊಂಡರೆಂದು ವರದಿ ತಿಳಿಸಿದೆ.
ವರುಣ್ ಕ್ಷೇತ್ರವಾದ ಪಿಲಿಭಿತ್‌ನಲ್ಲಿ ಮೇ 13ರಂದು ಚುನಾವಣೆ ನಡೆಯಲಿದ್ದು, ಅವರು ಎಪ್ರಿಲ್ 21ರಂದು ನಾಮಪತ್ರ ಸಲ್ಲಿಸಲಿದ್ದಾರೆ. ವರುಣ್ ತಾಯಿ ಮನೇಕಾ ಗಾಂಧಿ ಅವರು ಅನೋಲ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದು, ಶನಿವಾರ ನಾಮಪತ್ರ ಸಲ್ಲಿಸುತ್ತಿದ್ದಾರೆ.
ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕಾಗಿ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ವಯ ಬಂಧನಕ್ಕೀಡಾಗಿದ್ದ ವರುಣ್ ಸುಪ್ರೀಂ ಕೋರ್ಟ್ ಆದೇಶದನ್ವಯ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದಾರೆ. ಉದ್ರೇಕಕಾರಿ ಭಾಷಣ ಮಾಡುವುದಿಲ್ಲ ಎಂಬುದಾಗಿ ವರುಣ್ ನೀಡಿರುವ ಮುಚ್ಚಳಿಕೆಯಾಧಾರದಲ್ಲಿ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
|