ಬಾಬರಿ ಮಸೀದಿ ಧ್ವಂಸಕ್ಕೆ ಬಿಜೆಪಿಯಷ್ಟೇ ಕಾಂಗ್ರೆಸ್ಸೂ ಸಹ ಜವಬ್ದಾರ ಎಂಬುದಾಗಿ ಹೇಳುವ ಮೂಲಕ ರೈಲ್ವೇ ಸಚಿವ ಲಾಲೂಪ್ರಸಾದ್ ಯಾದವ್ ಅವರು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿದ್ದಾರೆ. ಬಿಜೆಪಿಯು 1992ರಲ್ಲಿ ಮಸೀದಿಯನ್ನು ಧ್ವಂಸ ಮಾಡಿದ ವೇಳೆಗೆ ಅದನ್ನು ರಕ್ಷಿಸುಲ್ಲಿ ಕಾಂಗ್ರೆಸ್ ವಿಫಲವಾಗಿರುವ ಕಾರಣ, ಅದೂ ಸಹ ಅಷ್ಟೇ ಜವಾಬ್ದಾರ ಎಂದು ಹೇಳಿದ್ದಾರೆ. ಮಸೀದಿ ಧ್ವಂಸ ವಿಚಾರಕ್ಕಾಗಿ ಆಡ್ವಾಣಿಯವರನ್ನು ತರಾಟೆಗೆ ತೆಗೆದುಕೊಂಡ ಲಾಲೂ, 16ನೆ ಶತಮಾನದ ಮಸೀದಿಯನ್ನು ಧ್ವಂಸಮಾಡುವಲ್ಲಿ ಕಾಂಗ್ರೆಸ್ಸೂ ಸಹ ಜವಬ್ದಾರ, ಅದು ಮನಸ್ಸು ಮಾಡಿದ್ದರೆ ಬಿಜೆಪಿಯನ್ನು ತಡೆಯಬಹುದಿತ್ತು ಎಂದು ನುಡಿದರು.ದರ್ಬಾಂಗ ಕ್ಷೇತ್ರದಲ್ಲಿ ಶುಕ್ರವಾರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಲಾಲೂ ಯುಪಿಎ ಅಂಗ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನ ತರಾಟೆಗೆ ತೆಗೆದುಕೊಂಡರು. ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಬಿರುಕುಂಟಾಗಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎಯ ಅಂಗಪಕ್ಷವಾಗಿದ್ದುಕೊಂಡೇ, ಲಾಲೂ ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡುವ ಹೇಳಿಕೆ ನೀಡಿದ್ದಾರೆ.ಎಪ್ರಿಲ್ 23ರ ಎರಡನೇ ಹಂತದ ಚುನಾವಣೆಗೆ ಮುಂಚಿತವಾಗಿ ಮುಸ್ಲಿಮರನ್ನು ಓಲೈಸಲು ಲಾಲೂ ಬಾಯಿಯಿಂದ ಇಂತಹ ಮಾತುಗಳು ಉರುಳಿವೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. |