ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಬಾಲಿವುಡ್ ತಾರೆ ಸಂಜಯ್ ದತ್ ವಿರುದ್ಧ ಪ್ರತಾಪ್‌ಗಢ ಜಿಲ್ಲಾಧಿಕಾರಿ ಅವರು ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟೀಸ್ ಜಾರಿಮಾಡಿದ್ದಾರೆ." ಮಾರ್ಚ್ 17ರಂದು ಸಂಜಯ್ ದತ್ ಅವರು ಮಾಯವತಿ ವಿರುದ್ಧ ಅಕ್ಷೇಪಣಾರ್ಹ ಹೇಳಿಕೆ ನೀಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಇದಕ್ಕಾಗಿ ಅವರಿಗೆ ನೋಟೀಸು ನೀಡಲಾಗಿದೆ" ಎಂದು ಜಿಲ್ಲಾಧಿಕಾರಿ ಪಿಂಕಿ ಜೋವಾಲ್ ಶನಿವಾರ ತಿಳಿಸಿದ್ದಾರೆ. ಎಸ್ಪಿ ಅಭ್ಯರ್ಥಿ ಅಕ್ಷಯ್ ಸಿಂಗ್ ಪ್ರತಾಪ್ ಗೋಪಾಲ್ ಪರವಾಗಿ ಕೆಪಿ ಹಿಂದೂ ಕಾಲೇಜ್‌ನಲ್ಲಿ ಭಾಷಣ ಮಾಡಿದ್ದ ಸಂಜಯ್, ತಾನು ಪ್ರತಾಪ್‌ಗಢದ ಜನತೆಗೆ 'ಜಾದೂ ಕಿ ಜಪ್ಪಿ ಔರ್ ಪಪ್ಪಿ' (ಮಾಂತ್ರಿಕ ಅಪ್ಪುಗೆ ಮತ್ತು ಚುಂಬನ) ನೀಡುವುದಾಗಿ ನುಡಿದರು. ಮತ್ತು ಅವಕಾಶ ನೀಡಿದಲ್ಲಿ ಇದನ್ನು ಉತ್ತರ ಪ್ರದೇಶದ ಮಾಯಾವತಿ ಅವರಿಗೂ ನೀಡುವುದಾಗಿ ಸಂಜಯ್ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ." ಅವರ ಈ ಹೇಳಿಕೆಯು ಮಹಿಳಾ ವಿರೋಧಿ ಹೇಳಿಕೆಯಾಗಿದೆ" ಎಂದು ಜಿಲ್ಲಾ ದಂಡಾಧಿಕಾರಿ ಹೇಳಿದ್ದಾರೆ. ಏತನ್ಮಧ್ಯೆ, ಪ್ರತಾಪ್‌ಗಢದ ಬಿಎಸ್ಪಿ ಕಾರ್ಯಕರ್ತರು ಈ ಸಂಬಂಧ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಮಾವು ಜಿಲ್ಲೆಯಲ್ಲಿ ಭಾಷಣ ಮಾಡುವ ವೇಳೆ ಕೋಮುವಾದಿ ಹೇಳಿಕೆ ನೀಡಿದ್ದ ದತ್ ವಿರುದ್ಧ ಎಪ್ರಿಲ್ 14ರಂದು ಎಫ್ಐಆರ್ ದಾಖಲಿಸಲಾಗಿದೆ. "ನನ್ನ ಅಮ್ಮ ಮುಸ್ಲಿಂ ಆಗಿರುವ ಕಾರಣ ನನ್ನನ್ನು ಜೈಲಿನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ" ಎಂದು ಸಂಜಯ್ ಹೇಳಿದ್ದಾರೆನ್ನಲಾಗಿದೆ. |