ಅಧಿಕಾರಕ್ಕೆ ಬಂದಲ್ಲಿ ವಿದೇಶಗಳಲ್ಲಿ ಕೊಳೆಯುತ್ತಿರುವ ರಾಷ್ಟ್ರದ ಕಪ್ಪಹಣವನ್ನು ಮರಳಿ ತರುತ್ತೇವೆ ಎಂಬ ಬಿಜೆಪಿಯ ಪ್ರಚಾರಕ್ಕೆ ಚುನಾವಣಾ ಆಯೋಗ ಅಡ್ಡಿಯುಂಟುಮಾಡಿದೆ.
ಎರಡನೆ ಹಂತದ ಚುನಾವಣೆಗಾಗಿ ಬಿಜೆಪಿಯು ತಯಾರಿಸಿರುವ ಜಾಹೀರಾತು ಚಿತ್ರಣದಲ್ಲಿ 15 ಸೆಕುಂಡುಗಳ ದೃಕ್‌ಶ್ರಾವ್ಯ ತುಣುಕಿಗೆ ಆಯೋಗ ಕತ್ತರಿ ಹಾಕಿದೆ.
ವಿದೇಶಿ ವ್ಯಕ್ತಿಯೊಬ್ಬ ಭ್ರಷ್ಟ ಭಾರತೀಯನಿಂದ ಸೂಟ್‌ಕೇಸ್ ಸ್ವೀಕರಿಸುವ ದೃಶ್ಯವು ಉತ್ತಮ ಅಭಿರುಚಿಯದ್ದಲ್ಲ ಎಂದು ಹೇಳಿರುವ ಆಯೋಗವು ಈ ದೃಶ್ಯದ ಪ್ರಸಾರಕ್ಕೆ ಅನುಮತಿ ನಿರಾಕರಿಸಿದೆ.
ಆದರೆ ಚುನಾವಣಾ ಆಯೋಗದ ಈ ಕ್ರಮವನ್ನು ಜಾಹಿರಾತಿನ ನಿರ್ಮಾಪಕರು ಹಿಡನ್ ಅಜೆಂಡಾ ಎಂದು ದೂರಿದ್ದು, ವಿದೇಶಿ ವ್ಯಕ್ತಿಯನ್ನು ತೂರಿಸುವುದು ಜಾಹೀರಾತಿನ ಪ್ರಮುಖ ಭಾಗವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಚುನಾವಣಾ ಆಯೋಗದ ಈ ನಿರ್ಧಾರದಿಂದ ದಿಗ್ಭ್ರಮೆಗೊಂಡಿರುವ ಬಿಜೆಪಿಯು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಾಗಿ ಹೇಳಿದೆ. |