ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ವೇಳೆ ಆತ್ಮಾಹುತಿ ದಾಳಿ ನಡೆಸುವ ಬೆದರಿಕೆ ಹಾಕಿರುವ ಲಷ್ಕೆರೆ-ಇ-ತೋಯ್ಬಾ ಉಗ್ರಗಾಮಿ ಸಂಘಟನೆಯು, ತಮ್ಮ ವಿನಾಶವನ್ನು ಬಯಸುವವರು ಮಾತ್ರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದೆ.
"ಚುನಾವಣೆ ಪ್ರಕ್ರಿಯೆ ವೇಳೆ ನಾವು ಫಿದಾಯಿನ್ ದಾಳಿ ನಡೆಸುತ್ತೇವೆ" ಎಂದು ಲಷ್ಕರೆ ವಕ್ತಾರ ಅಬ್ದುಲ್ಲಾ ಗಝ್ನಾವಿ ಶ್ರೀನಗರ ಮೂಲದ ಮಾಧ್ಯಮ ಸಂಘಟನೆಗಳಿಗೆ ನೀಡಿರುವ ಹೇಳಿಕೆಯಲ್ಲಿ ಎಚ್ಚರಿಸಿದ್ದಾನೆ. ಚುನಾವಣೆಯಲ್ಲಿ ಭಾಗವಹಿಸುವುದರ ವಿರುದ್ಧ ಎಚ್ಚರಿಕೆ ನೀಡಿರುವ ಆತ, ಒಂದೊಮ್ಮೆ ಯಾರೇ ಆದರೂ ಮತಚಲಾಯಿಸಿದರೆ, ಅವರ ವಿನಾಶವನ್ನು ಅವರೇ ಕಂಡುಕೊಳ್ಳುತ್ತಾರೆ ಎಂದು ಹೇಳಿದ್ದಾನೆ.
ನವದೆಹಲಿಯು ಜಮ್ಮು ಕಾಶ್ಮೀರ ಕಾನೂನು ಬಾಹಿರ ಸ್ವಾಧೀನವನ್ನು ಬಲಪಡಿಸಲು ಯತ್ನಿಸುತ್ತಿದೆ ಎಂದು ಮುಂಬೈ ದಾಳಿಯ ಆರೋಪ ಹೊತ್ತಿರುವ ಲಷ್ಕರೆ ಹೇಳಿದೆ. ಆದರೆ, ಜಮ್ಮು ಕಾಶ್ಮೀರದಲ್ಲಿ ನಡೆದ ವಿಧಾನಸಭಾ ಚುನಾವಣೆ ವೇಳೆ ಲಷ್ಕರೆಯು ಚುನಾವಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದುಹೇಳಿತ್ತು.
ಈ ಹಿಂದೆ ಸಂಯುಕ್ತ ಜಿಹಾದ್ ಮಂಡಳಿ(ಯುಜೆಸಿ)ಯು ಲೋಕಸಭಾ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿತ್ತು. ಯುಜೆಸಿಯು 13 ಉಗ್ರಗಾಮಿ ಸಂಘಟನೆಗಳ ಮಹಾಮಂಡಳವಾಗಿದ್ದು, ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಉಂಟು ಮಾಡುವ ಬೆದರಿಕೆ ಹಾಕಿದೆ.
|