ರಾಜೀವ್ ಗಾಂಧಿ ಹತ್ಯೆಯ ಘೋಷಿತ ಅಪರಾಧಿಯಾಗಿರುವ ಎಲ್ಟಿಟಿಇ ಮುಖ್ಯಸ್ಥ ವಿ. ಪ್ರಭಾಕರನನ್ನು ಒಬ್ಬ 'ಉತ್ತಮ ಸ್ನೇಹಿತ' ಎಂದು ಕರೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಅವರು ತಾನು ಎಲ್ಟಿಟಿಇ ಉಗ್ರಗಾಮಿ ಸಂಘಟನೆಯಲ್ಲ ಎಂದು ಹೇಳಿಲ್ಲವೆಂದು ಸ್ಪಷ್ಟಪಡಿಸಿದ್ದು, ತಾನು ಶ್ರೀಲಂಕಾದ ತಮಿಳರ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದೆ ಅಷ್ಟೆ ಎಂದು ಸೋಮವಾರ ವಿವರಿಸಿದ್ದಾರೆ.
"ಎಲ್ಟಿಟಿಇಯು ಒಂದು ಉಗ್ರಗಾಮಿ ಸಂಘಟನೆಯಾಗಿ ಆರಂಭಗೊಳ್ಳಲಿಲ್ಲ, ಅದು ನಂತರ ಉಗ್ರಗಾಮಿ ಸಂಘಟನೆಯಾಗಿ ಪರಿವರ್ತನೆಯಾಯಿತು" ಎಂಬುದಾಗಿ ಅವರು ತನ್ನ ಭಾನುವಾರದ ಹೇಳಿಕೆಯನ್ನು ಸರಿಪಡಿಸಿಕೊಳ್ಳಲು ಯತ್ನಿಸಿದ್ದಾರೆ.
"ರಾಜೀವ್ ಗಾಂಧಿಯವರನ್ನು ಹತ್ಯೆ ಮಾಡಿರುವುದನ್ನು ನಾವು ಕ್ಷಮಿಸಲು ಸಾಧ್ಯವಿಲ್ಲ. ಶ್ರೀಪೆರಂಬುದೂರ್ ಮರೆಯಲು ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.
ಭಾನುವಾರ ಟಿವಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕರುಣಾನಿಧಿ ಅವರು "ಪ್ರಭಾಕರನ್ ತನ್ನ ಒಬ್ಬ ಉತ್ತಮ ಸ್ನೇಹಿತ. ನಾನು ಭಯೋತ್ಪಾದಕನಲ್ಲ" ಎಂದು ಮುಗುಳ್ನಗುವಿನೊಂದಿಗೆ ಪ್ರತಿಕ್ರಿಯಿಸಿದ್ದರು. ಎಲ್ಟಿಟಿಇ ಮುಖ್ಯಸ್ಥನನ್ನು ಉಗ್ರನೆಂದು ಬಣ್ಣಿಸಲು ನಿರಾಕರಿಸಿದ್ದ ಕರುಣಾನಿಧಿ, ಎಲ್ಟಿಟಿಯು ತಪ್ಪು ವಿಧಾನಗಳನ್ನು ಬಳಸಿದ್ದರೂ ಅವರ ಗುರಿ ಸರಿಯಾಗಿದೆ. 'ಅವರ ರೀತಿ ತಪ್ಪಿರಬಹುದು, ಆದರೆ ನೀತಿ ತಪ್ಪಲ್ಲ' ಎಂದು ಭಾರತದಲ್ಲಿ ಉಗ್ರಗಾಮಿ ಸಂಘಟನೆ ಎಂದು ಘೋಷಿಸಲಾಗಿರುವ ಎಲ್ಟಿಟಿಇ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಮಿಳ್ನಾಡಿನಲ್ಲಿ ಡಿಎಂಕೆ ಸರ್ಕಾರಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ತನ್ನ ಮಿತ್ರಪಕ್ಷದ ಮುಖ್ಯಸ್ಥನ ಹೇಳಿಕೆಯನ್ನು ವಿರೋಧಿಸಿದ್ದರೂ ಕರುಣಾನಿಧಿ ವಿರುದ್ಧ ವಾಗ್ದಾಳಿ ನಡೆಸಲು ಹಿಂಜರಿದಿದೆ.
ತನ್ನ ಪುತ್ರಿ ಹಾಗೂ ರಾಜ್ಯಸಭಾ ಸದಸ್ಯೆ ಕನಿಮೋಳಿ ಅವರ ಉಪಸ್ಥಿತಿಯಲ್ಲಿ ಖಾಸಗಿ ವಾಹಿನಿಗಿ ನೀಡಿದ್ದ ಸಂದರ್ಶನದಲ್ಲಿ, ನೀವು ಪ್ರಭಾಕರ್‌ನನ್ನು ಒಬ್ಬ ಉಗ್ರನಂತೆ ನೋಡುತ್ತೀರಾ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಕರುಣಾ ನಿಧಿ ತಮಿಳಿನಲ್ಲಿ "ನಾನ್ ಅಪ್ಪಡಿ ಪಾರ್ಕಲೈ" (ನಾನು ಹಾಗೆ ನೋಡುವುದಿಲ್ಲ) ಎಂದು ಉತ್ತರಿಸಿದ್ದರು.
ಪ್ರಭಾಕರನ್ ಹಾಗೂ ಆತನ ಸಂಘಟನೆಯ ಅನುಯಾಯಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿದ್ದ ಕರುಣಾನಿಧಿ "ಪ್ರಭಾಕರನ್ ಸಂಘಟನೆಯ ಕೆಲವು ವ್ಯಕ್ತಿಗಳು ಉಗ್ರಾವಾದಿಗಳಾಗಿರಬಹುದು. ಆದರೆ ಅದು ಆತನ ತಪ್ಪಲ್ಲ" ಎಂದಿದ್ದರು. ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳುನಾಡು ಸ್ಥಾಪಿಸುವ ಎಲ್ಟಿಟಿಯಿ ಉದ್ದೇಶಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದರು. "ಎಲ್ಟಿಟಿಇ ಗುರಿ ಶ್ರೇಷ್ಠವಾಗಿದೆ. ಅವರು ತಮಿಳು ಈಳಂ ಸ್ಥಾಪಿಸುವ ಗುರಿಯೊಂದಿಗೆ ಕಾರ್ಯಾಚರಿಸುತ್ತಿದ್ದಾರೆ. ಅದರೆ, ಎಲ್ಲೋ ಇವರ ಗಮನಕ್ಕೆ ಬಾರದಂತೆ ಅವರೊಂದಿಗೆ ಉಗ್ರರು ನುಸುಳಿಕೊಂಡಿದ್ದಾರೆ ಎಂದು ಕರುಣಾನಿಧಿ ವಿಶ್ಲೇಷಿಸಿದ್ದರು.
ಒಂದೊಮ್ಮೆ ಈಗ ನಡೆಯುತ್ತಿರುವ ಯುದ್ಧದಲ್ಲಿ ಪ್ರಭಾಕರನ್ ಸಾವನ್ನಪ್ಪುತ್ತಿದ್ದರೆ, ತನಗೆ ನೋವಾಗುತ್ತಿತ್ತು ಎಂದು ಹೇಳುವ ಮೂಲಕ ಪ್ರಭಾಕರನ್ ಮೇಲಿನ ತನ್ನ ಅನುಕಂಪವನ್ನು ಕರುಣಾನಿಧಿ ಸ್ಪಷ್ಟಪಡಿಸಿದ್ದರು. |