ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳಿಗೆ ಪರ್ಯಾಯವಾಗಿ ರೂಪಿಸಲಾಗಿರುವ ತೃತೀಯ ರಂಗವು ಚುನಾವಣೆಗಳು ಪೂರ್ಣಗೊಳ್ಳುವ ಮುನ್ನವೇ ಸಾಯುವಂತೆ ತೋರುತ್ತಿದೆ. ಭರ್ಜರಿಯ ಮೈತ್ರಿಯೇನು ಇಲ್ಲವೆಂದು ತೃತೀಯ ರಂಗದ ಸ್ಥಾಪನೆಗೆ ಮುಂದಾಗಿದ್ದ ಸಿಪಿಎಂ ಹೇಳಿದೆ.
ಬಿಜೆಡಿ, ಟಿಡಿಪಿಯಂತಹ ಪಕ್ಷಗಳೊಂದಿಗೆ ರಾಜ್ಯಮಟ್ಟದ ಮೈತ್ರಿಗೆ ಸಿಪಿಎಂ ಸಹಿ ಹಾಕಿದೆ. ಆದರೆ ಸ್ಪಷ್ಟ ಚಿತ್ರಣವು ಚುನಾವಣೆಯ ಬಳಿಕವಷ್ಟೆ ಗೊತ್ತಾಗಬೇಕಿದೆ ಎಂದು ಸಿಪಿಎಂನ ಸೀತಾರಾಮ ಯಚೂರಿ ಹೇಳಿದ್ದಾರೆ.
ತೃತೀಯ ರಂಗಕ್ಕೆ ದೊಡ್ಡ ಹಿನ್ನಡೆ ಎಂದರೆ, ಪ್ರಧಾನಿ ಅಭ್ಯರ್ಥಿತನ. ರಂಗದಲ್ಲಿರುವ ಹೆಚ್ಚಿನವರು ಪ್ರಧಾನಿ ಪಟ್ಟದ ಆಕಾಂಕ್ಷಿಗಳೇ ಆಗಿರುವುದು ತೊಡಕಾಗಿದೆ. ಆದರೆ ಈ ಕುರಿತ ನಿರ್ಧಾರವನ್ನು ಚುನಾವಣೆಯ ಬಳಿಕವೇ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
"ರಾಷ್ಟ್ರಮಟ್ಟದಲ್ಲಿ ತೃತೀಯರಂಗವಿಲ್ಲ. ರಾಜ್ಯಮಟ್ಟದಲ್ಲಿ ಹಲವಾರು ಜಾತ್ಯತೀತ ಪಕ್ಷಗಳ ನಡುವೆ ಒಪ್ಪಂದವಿದೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತವು ಎಡಪಕ್ಷಗಳ ವ್ಯಕ್ತಿಯೊಬ್ಬನನ್ನು ಪ್ರಧಾನಿಯಾಗಿ ಕಾಣಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಯಚೂರಿ, ಈಗಲೇ ಏನನ್ನೂ ಹೇಳಲಾಗದು, ಚುನಾವಣೆಯ ಬಳಿಕವಷ್ಟೆ ನಿರ್ಧರಿಸಬೇಕು ಎಂದಷ್ಟೆ ಹೇಳಿದ್ದಾರೆ. |