ಬಾಬರಿ ಮಸೀದಿ ಧ್ವಂಸಕ್ಕೆ ಬಿಜೆಪಿಯಷ್ಟೆ ಕಾಂಗ್ರೆಸ್ಸೂ ಸಹ ಕಾರಣ ಎಂಬುದಾಗಿ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ನೀಡಿರುವ ವಿವಾದಾಸ್ಪದ ಹೇಳಿಕೆಯನ್ನು, ಅವರ ಮಿತ್ರ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಅವರು ಸಮರ್ಥಿಸಿಕೊಂಡಿದ್ದಾರೆ. " ಅವರು (ಲಾಲೂಪ್ರಸಾದ್) ಹೇಳಿದ್ದರಲ್ಲಿ ತಪ್ಪೇನಿದೆ" ಎಂದು ಪಾಸ್ವಾನ್ ಕೇಳಿದ್ದಾರೆ. ಕಾಂಗ್ರೆಸ್ ವಿರುದ್ಧ ಮತ್ತಷ್ಟು ಹರಿಹಾಯ್ದಿರುವ ಪಾಸ್ವಾನ್ "ಕಾಂಗ್ರೆಸ್ ಏನು ಮಾಡುತ್ತಿದೆ? ಹಾಜಿಪುರದಲ್ಲಿ 2000 ಮತಗಳನ್ನೂ ಗಳಿಸದು ಎಂಬುದು ತಿಳಿದಿದ್ದರೂ ಅವರು ನನ್ನೆದುರು ಅಭ್ಯರ್ಥಿಯನ್ನು ಯಾಕೆ ಕಣಕ್ಕಿಳಿಸಿದ್ದಾರೆ? ಅವರು ಯಾವ ಸಾಮರ್ಥ್ಯ ಸಾಬೀತು ಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ. ಲಾಲೂ ಅವರ ಆರ್‌ಜೆಡಿ ಹಾಗೂ ಪಾಸ್ವಾನ್ ಅವರ ಎಲ್‌ಜೆಪಿ ಎರಡೂ ಪಕ್ಷಗಳೂ ಕಾಂಗ್ರೆಸ್ ನೇತೃತ್ವದ ಯುಪಿಎಯ ಅಂಗಸಂಸ್ಥೆಗಳಾಗಿವೆ. ಬಿಹಾರದಲ್ಲಿ ಸೀಟು ಹಂಚಿಕೆ ವಿಚಾರದಿಂದಾಗಿ ಈ ಎರಡು ಪಕ್ಷಗಳು ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಹಳಸಿದ್ದು ಇವುಗಳ ನಡುವಿನ ಬಿರುಕು ದಿನೇದಿನೇ ಆಳವಾಗುತ್ತಿದೆ. ಕಾಂಗ್ರೆಸ್ ತಾನು ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದರೆ, ಆರ್‌ಜೆಡಿ, ಎಲ್‌ಜೆಪಿ ಹಾಗೂ ಎಸ್ಪಿಗಳು ಪಸ್ಪರ ಹೊಂದಾಣಿಕೆಯೊಂದಿಗೆ ಬಿಹಾರ ಮತ್ತು ಉತ್ತರ ಪ್ರದೇಶದ 120 ಲೋಕಸಭಾ ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.ಎಪ್ರಿಲ್ 17ರಂದು ಬಿಹಾರದ ದರ್ಬಾಂಗದಲ್ಲಿ ಲಾಲು ಪ್ರಸಾದ್ ಯಾದವ್ ಅವರು ಬಾಬರಿ ಮಸೀದಿ ಧ್ವಂಸಕ್ಕೆ ಬಿಜೆಪಿಯಷ್ಟೆ ಕಾಂಗ್ರೆಸ್ಸೂ ಸಹ ಕಾರಣ ಎಂದು ಹೇಳಿದ್ದರು. ಅಲ್ಲದೆ, ಕಾಂಗ್ರೆಸ್ ಮನಸ್ಸು ಮಾಡಿದ್ದರೆ ಮಸೀದಿ ಉರುಳುವುದನ್ನು ತಡೆಯಬಹುದಿತ್ತು ಎಂದು ಹೇಳಿದ್ದರು. |