ಮುಂಬೈ ದಾಳಿಕೋರ ಕಸಬ್ ಹಾಗೂ ಆತನ ಸಹಚರನಾಗಿದ್ದ ಇಸ್ಮಾಯಿಲ್ ರಾಜಭನದ ಮೇಲೆ ದಾಳಿ ನಡೆಸುವ ಗುರಿ ಹೊಂದಿದ್ದು, ಮಲಬಾರ್ ಹಿಲ್‌ಗೆ ತೆರಳುವ ವೇಳೆ ಚೌಪಾಟಿಯಲ್ಲಿ ಪೊಲೀಸರು ತಡೆದ ಕಾರಣ ಈ ಯೋಜನೆ ಯಶಸ್ವಿಯಾಗಿಲ್ಲ ಎಂದು ಮುಂಬೈ ದಾಳಿ ಪ್ರಕರಣದ ಸರಕಾರಿ ವಕೀಲರು ಹೇಳಿದ್ದಾರೆ.
ದಾಳಿಯ ವೇಳೆ ಪೊಲೀಸರ ಗುಂಡೇಟಿನಿಂದ ಸತ್ತುಬಿದ್ದ ಇಸ್ಮಾಯಿಲ್ ಕಿಸೆಯಲ್ಲಿ ಸಿಕ್ಕಿದ್ದ ನಕಾಶೆಯು ಚೌಪಾಚಿ, ಮಲಬಾರ್ ಹಿಲ್ ಮತ್ತು ರಾಜ್ ಭವನದ ಸ್ಥಳಗಳನ್ನು ತೋರಿಸುತ್ತಿತ್ತು ಎಂಬುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್(ಪಿಪಿ) ಉಜ್ವಲ್ ನಿಕಾಮ್ ವಿಶೇಷ ನ್ಯಾಯಲಯಕ್ಕೆ ತಿಳಿಸಿದ್ದಾರೆ.
ಪ್ರಕರಣದ ಆರೋಪದ ಮೇಲೆ ಬಂಧಿತನಾಗಿರುವ ಫಾಹಿಮ್ ಅನ್ಸಾರಿಯು ದಾಳಿಯ ಸಂಚುಕೋರರಿಗೆ ರಚಿಸಿದ್ದಾನೆನ್ನಲಾಗಿರುವ ನಕಾಶೆ ಇದೇ ಆಗಿದೆ ಎಂದು ಹೇಳಲಾಗಿದೆ. ಈ ನಕಾಶೆಯನ್ನು ಕೈಬರಹ ತಜ್ಞರಿಗೆ ನೀಡಲಾಗಿದ್ದು, ಅವರಿದು ಫಾಹಿಮ್ ತಯಾರಿಸಿರುವುದೆಂದು ದೃಢಪಡಿಸಿದ್ದಾರೆ ಎಂದು ಉಜ್ವಲ್ ತಿಳಿಸಿದ್ದಾರೆ.
ಇಸ್ಮಾಯಿಲ್ ಅಲಿಯಾಸ್ ಇಸ್ಮಾಯಿಲ್ ಅಬುಗೆ ಮಾತ್ರ ಮಲಬಾರ್ ಹಿಲ್ ತಿಳಿದಿದ್ದು, ಅಲ್ಲಿಗೆ ತಲುಪಿದ ಬಳಿಕ ಈ ಕುರಿತು ಕಸಬ್‌ಗೆ ತಿಳಿಸುವುದಾಗಿ ಹೇಳಿದ್ದನೆನ್ನಲಾಗಿದೆ.
ಈ ಇಬ್ಬರು ಸೇರಿ ಸ್ಕೋಡಾ ಕಾರೊಂದನ್ನು ಕದ್ದು ಮಲಬಾರ್ ಹಿಲ್ ಕಡೆ ತೆರಳುತ್ತಿದ್ದ ವೇಳೆ ಪೊಲೀಸರೊಂದಿಗೆ ಮುಖಾಮುಖಿಯಾಗಿದ್ದು, ಗುಂಡಿನ ಚಕಮಕಿ ನಡೆದಿತ್ತು. ಅಲ್ಲಿ ಇಸ್ಮಾಯಿಲ್ ಸತ್ತಿದ್ದರೆ, ಕಸಬ್‌ನನ್ನು ಜೀವಂತ ಸೆರೆಹಿಡಿಯಲಾಗಿತ್ತು ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಕಸಬ್ ತನ್ನ ತಪ್ಪೊಪ್ಪಿಗೆಯಲ್ಲಿ ಹೇಳದಿದ್ದರೂ, ರಾಜಭವನದ ಮೇಲೆ ದಾಳಿನಡೆಸುವ ಹುನ್ನಾರ ಹೊಂದಿದ್ದು, ಆ ಸ್ಥಳವನ್ನು ನಕಾಶೆಯಲ್ಲಿ ಆವಣಗಳೊಳಗೆ ಪ್ರಧಾನವಾಗಿ ಗುರುತಿಸಲಾಗಿದೆ ಎಂದು ಅವರು ಬೆಟ್ಟು ಮಾಡಿದರು.
ಇದರಿಂದಾಗಿ ರಾಜಭವನ ಅವರ ಪ್ರಧಾನ ಗುರಿಯಾಗಿತ್ತು ಎಂಬುದು ತಿಳಿಯುತ್ತದೆ ಎಂಬುದಾಗಿ ಉಜ್ವಲ್ ಅವರು ನ್ಯಾಯಾಧೀಶ ಎಂ.ಎಲ್. ತಹಿಲ್ಯಾನಿ ಅವರ ಮುಂದೆ ಅರಿಕೆ ಮಾಡಿದ್ದಾರೆ. |