ಬಾಲಿವುಡ್ ತಾರೆ ಅಮಿತಾಭ್ ಬಚ್ಚನ್ ಅವರಿಗೆ ಬಾಂಬೆ ಹೈಕೋರ್ಟ್ ತೆರಿಗೆ ವಿನಾಯಿತಿ ನೀಡಿರುವುದನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆಯು ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದೆ. ಪ್ರಕರಣದ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಎರಡು ವಾರಗಳಿಗೆ ಮುಂದೂಡಿದೆ.ಅಮಿತಾಬ್ ಅವರ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಿಂದ ಗಳಿಸಿದ ಆದಾಯಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.ಈ ಕಾರ್ಯಕ್ರಮದಿಂದ ಬಚ್ಚನ್ ಅವರ ಒಟ್ಟು ಆದಾಯ 50.92 ಕೋಟಿ ರೂಪಾಯಿಗಳು. ಇದರಲ್ಲಿ ಶೇ.30ರ ತೆರಿಗೆ ವಿನಾಯಿತಿಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿತ್ತು.ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80 ಆರ್ಆರ್ ಪ್ರಕಾರ ಕಲವಾವಿದನೊಬ್ಬನಿಗೆ ತೆರಿಗೆ ವಿನಾಯಿತಿ ನೀಡಬೇಕು ಎಂಬ ಬಚ್ಚನ್ ಅವರ ವಾದವನ್ನು ಸ್ವೀಕರಿಸಿದ್ದ ಹೈಕೋರ್ಟ್ ಅವರಿಗೆ ತೆರಿಗೆ ರಿಯಾಯಿತಿಗೆ ಆದೇಶ ನೀಡಿತ್ತು.ಇದರ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಆದಾಯ ತೆರಿಗೆ ಇಲಾಖೆಯು, ಇಂತಹ ವಿನಾಯಿತಿಯು ವಿದೇಶಗಳಲ್ಲಿ ನೀಡುವ ಕಾರ್ಯಕ್ರಮಗಳಿಂದ ಗಳಿಸಿದ ಆದಾಯ ಅಥವಾ ಯಾವುದಾದರೂ ವಿದೇಶಿ ಸಂಸ್ಥೆಗಳು ಮಾಡಿದ ಪಾವತಿಗೆ ಅನ್ವಯವಾಗುತ್ತದೆ ಎಂಬ ಅಂಶವನ್ನು ಮುಂದಿಟ್ಟಿದೆ.ಬಚ್ಚನ್ ಅವರು ಸ್ಟಾರ್ ಇಂಡಿಯಾ ಲಿಮಿಟೆಡ್‌ನ ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಕಾರ್ಯಕ್ರಮ ನಿರೂಪಕನಾಗಿ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಅವರ ಈ ಪಾತ್ರವನ್ನು 'ಕಲಾವಿದ' ಎಂದು ಪರಿಗಣಿಸಲು ಬರುವುದಿಲ್ಲ ಎಂದು ಆದಾಯತೆರಿಗೆ ಇಲಾಖೆ ವಾದಿಸಿದೆ. |