ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 'ವಿಶ್ವಾಸಾರ್ಹತೆ ಮತ್ತು ನಿರ್ಣಾಯಕತ್ವ'ವನ್ನು ತೋರುತ್ತಿಲ್ಲ ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿರುವ ಭಾರತ, ನಿರಾಕರಿಸಲಾಗದ ಪುರಾವೆಯನ್ನು ನೀಡಿದ್ದರೂ, ಅದು 'ರಾಷ್ಟ್ರ ಪ್ರೇಷಿತ ಭಯೋತ್ಪಾದನೆ'ಯನ್ನು ಮುಂದುವರಿಸುತ್ತಿದೆ ಎಂದು ಆಪಾದಿಸಿದೆ.ಮುಂಬೈ ದಾಳಿಗೆ ಸಂಬಂಧಿಸಿದಂತೆ ಈ ಘಟನೆಗೆ ಜವಾಬ್ದಾರರಾಗಿರುವರ ಕುರಿತು ಪಾಕಿಸ್ತಾನಕ್ಕೆ ತಿಳಿದಿದ್ದರೂ ಅದು ನೀಡಿರುವ ಜವಾಬು ಸಮರ್ಪಕವಾಗಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ." ಪಾಕಿಸ್ತಾನಕ್ಕೆ ಅಮೆರಿಕ ತಿಳಿಸಿದೆ, ಗುಪ್ತಚರ ಮಂದಿಯೂ ಅಪರಾಧಿಗಳು ಯಾರು ಎಂಬದನ್ನು ತಿಳಿಸಿವೆ" ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪ್ರಧಾನಿ ನುಡಿದರು. ಮುಂಬೈದಾಳಿ ಕುರಿತಂತೆ ಇಸ್ಲಾಮಾಬಾದಿನ ಪ್ರತಿಸ್ಪಂದನೆಯು ತೃಪ್ತಿದಾಯಕವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದ ಅವರು ಮೇಲಿನಂತೆ ಹೇಳಿದ್ದಾರೆ.ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ 'ಎ ಬೆಟರ್ ಇಂಡಿಯ, ಎ ಬೆಟರ್ ವರ್ಲ್ಡ್' ಎಂಬ ಪುಸ್ತಕ ಬಿಡುಗಡೆಯ ಪಾರ್ಶ್ವದಲ್ಲಿ ಅವರು ಹಿರಿಯ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನದೊಂದಿಗೆ ಯಾವುದೇ ಸಂಪರ್ಕವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 26/11ರ ನರಮೇಧದ ಬಳಿಕ ರಾಜತಾಂತ್ರಿಕ ಮಟ್ಟದ ಸಂಪರ್ಕ ಹೊರತು ಪಡಿಸಿದರೆ ಉಳಿದಂತೆ ಅತ್ಯಲ್ಪ ಎಂದು ನುಡಿದರು.ಮುಂಬೈದಾಳಿಯ ಹಿಂದಿನ ಸಂಚುಕೋರರ ವಿರುದ್ಧ ಕ್ರಮಕೈಗೊಳ್ಳದ ಮತ್ತು ಪಾಕಿಸ್ತಾನದ ಉಗ್ರವಾದಿ ನೆಲೆಗಳನ್ನು ಪುಡಿಗಟ್ಟದ ಹೊರತಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ಮುಂದುವರಿಕೆಯ ಪ್ರಶ್ನೆಯೇ ಇಲ್ಲ ಎಂದು ಮನಮೋಹನ್ ಸಿಂಗ್ ಈ ಹಿಂದಿನ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದರು.ಉಗ್ರವಾದ ಮತ್ತು ಆತಂಕವಾದದ ವಿರುದ್ಧ ಹೋರಾಡಲು ಪಾಶ್ಚಾತ್ಯ ರಾಷ್ಟ್ರಗಳು ಪಾಕಿಸ್ತಾನಕ್ಕೆ ನೀಡಿರುವ ದೊಡ್ಡಮೊತ್ತದ ಸಹಾಯಧನವು ಭಾರತವನ್ನು ಉದ್ವಿಗ್ನತೆಗೆ ತಳ್ಳಿದೆ ಎಂದು ಅವರು ನುಡಿದರು. ಈ ಕುರಿತು ನಮಗೆ ಚಿಂತೆ ಇದೆ ಎಂದು ಬಿಲಿಯಗಟ್ಟಲೆ ಡಾಲರ್‌ಗಳ ನೆರವನ್ನು ಪಾಕಿಸ್ತಾನಕ್ಕೆ ನೀಡಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನುಡಿದರು.ಶಾಲೆಗಳು, ರಸ್ತೆ, ಆಸ್ಪತ್ರೆಗಳ ನಿರ್ಮಾಣಕ್ಕಾಗಿ ಪಾಕಿಸ್ತಾನಕ್ಕೆ ನೆರವು ನೀಡಿದರೆ ನಮಗೇನು ಸಮಸ್ಯೆ ಇಲ್ಲ. ಆದರೆ, ಈ ರಾಷ್ಟ್ರಕ್ಕೆ ನೀಡಿರುವ ಸೇನಾ ಸಹಾಯವನ್ನು ನಮ್ಮ ವಿರುದ್ಧವೇ ಬಳಸಲಾಗುತ್ತದೆ ಎಂಬುದು ನಮ್ಮ ಅನುಭವ ಎಂದು ಪ್ರಧಾನಿ ಸಿಂಗ್ ನುಡಿದರು. |