ಮುಂಬೈ ನರಮೇಧ ನಡೆಸಿರುವ ಉಗ್ರರಲ್ಲಿ ಜೀವಂತ ಸೆರೆಸಿಕ್ಕಿರುವ ಭಯೋತ್ಪಾದಕ ಅಜ್ಮಲ್ ಅಮೀರ್ ಕಸಬ್ ಇದೀಗ ತನ್ನ ಮೊದಲಿನ ಹೇಳಿಕೆಗೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದು, ಇಂಗ್ಲೀಷ್ ಭಾಷೆಯಲ್ಲಿ ನಡೆಸುವ ನ್ಯಾಯಾಲಯದ ಪ್ರಕ್ರಿಯೆ ತನಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾನೆ." ಕಸಬ್ ಮತ್ತು ಪಾಕಿಸ್ತಾನ ಎಂಬ ಶಬ್ದಗಳನ್ನು ಹೊರತುಪಡಿಸಿದರೆ ಸರಕಾರಿ ವಕೀಲರು ನ್ಯಾಯಾಲಯಕ್ಕೆ ಏನು ಹೇಳುತ್ತಾರೆ ಎಂಬುದು ತಮಗೆ ತಿಳಿದಿಲ್ಲ" ಎಂಬುದಾಗಿ ಕಸಬ್ ನ್ಯಾಯಾಧೀಶ ಎಂ.ಎಲ್. ತಹಿಲ್ಯಾನಿ ಅವರಿಗೆ ಹೇಳಿದ್ದಾನೆ.ಈ ಹಿಂದೆ ಎರಡು ಬಾರಿ ಕಸಬ್ ತನಗೆ ನ್ಯಾಯಾಲಯದ ಕಲಾಪಗಳು ಅರ್ಥವಾಗುತ್ತದೆ ಮತ್ತು ಇಂಗ್ಲೀಷ್ ಅರಿತುಕೊಳ್ಳಬಲ್ಲೆ ಎಂದು ಹೇಳಿದ್ದ. ಆದರೆ ಸೋಮವಾರ ವಿಭಿನ್ನವಾದ ನಿಲುವನ್ನು ವ್ಯಕ್ತಪಡಿಸಿದ್ದಾನೆ.ಕಸಬ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತ ಮಂಕಾಗಿದ್ದ ಮತ್ತು ಯಾವುದೇ ಭಾವನೆಯನ್ನು ತೋರ್ಪಡಿಸದೆ ಕೈಕಟ್ಟಿ ಕುಳಿತಿದ್ದ. ಇದನ್ನು ಕಂಡ ನ್ಯಾಯಾಧೀಶರು ಆತನನ್ನು ಮಾತನಾಡಿಸಿದರು. ಸಂಭಾಷಣೆಯ ಸಾರಾಂಶ ಇಂತಿದೆ.ನ್ಯಾಯಾಧಿಶರು: ನಿಮ್ಮ ಸಮಸ್ಯೆ ಏನು?ಕಸಬ್: ನನ್ನ ಸಮಸ್ಯೆ ಎಂದರೆ ನನಗೆ ಏನೂ ಅರ್ಥವಾಗುತ್ತಿಲ್ಲ.ನ್ಯಾಯಾಧಿಶರು: ಯಾಕೆ?ಕಸಬ್: ಬರಿ ಕಸಬ್ ಮತ್ತು ಪಾಕಿಸ್ತಾನ ಎಂಬುದನ್ನು ಹೊರತುಪಡಿಸಿದರೆ ನಂಗೆ ಬೇರೇನೂ ಅರ್ಥವಾಗುತ್ತಿಲ್ಲ.ನ್ಯಾಯಾಧಿಶರು: ನಿಮ್ಮ ಆರೋಗ್ಯ ಸರಿ ಇದೆಯೇ?ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸರಕಾರಿ ವಕೀಲರಾದ ಉಜ್ವಲ್ ನಿಕಾಮ್ ಅವರು, ಕಸಬ್ ಚೆನ್ನಾಗಿರುವುದಾಗಿ ತಿಳಿಸಿದರು. ಬಳಿಕ ನಿಕಾಮ್ ಅವರು ತಮ್ಮ ವಾದ ಮುಂದುವರಿಸಿದರು. |