ಮುಂಬೈದಾಳಿ ನಡೆಸಿರುವ ಅಜ್ಮಲ್ ಅಮೀರ್ ಕಸಬ್‌ನನ್ನು ವಿಶೇಷವಾಗಿ ನಡೆಸಿಕೊಳ್ಳುತ್ತಿರುವುದನ್ನು ಕಟುವಾಗಿ ಟೀಕಿಸಿರುವ ಶಿವಸೇನಾ ಮುಖ್ಯಸ್ಥ ಬಾಳಾಠಾಕ್ರೆ, ಆತನ ವಿಚಾರಣೆಯನ್ನು ಒಂದು ತಿಂಗಳಲ್ಲಿ ಮುಗಿಸಲು ಒತ್ತಾಯಿಸಿದ್ದಾರೆ.
ಶಿವಸೇನಾ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಮಂಗಳವಾರ ಪ್ರಕಟವಾಗಿರುವ ಸಂಪಾದಕೀಯದಲ್ಲಿ, 'ಕಸಬ್ ಸಾಹೇಬ್ರಿಗೆ' ನೀಡುತ್ತಿರುವ ವಿಶೇಷ ಭದ್ರತೆಯಿಂದಾಗಿ ತೆರಿಗೆ ಪಾವತಿದಾರರ ಬಹುದೊಡ್ಡ ಮೊತ್ತವು ಪೋಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
"ಉಗ್ರ ಕಸಬ್‌ಗೆ ನೀಡಿರುವಂತಹ ಭದ್ರತೆಯನ್ನು ಈ ರಾಷ್ಟ್ರದ ಪ್ರಧಾನಿಯೂ ಹೊಂದಿಲ್ಲ. ನಾವು ಇಂತಹ ಬಲಿಷ್ಠ ಪ್ರಜಾಪ್ರಭುತ್ವವನ್ನು ಹೊಂದಿದ್ದೇವೆ ಮತ್ತು ನಮ್ಮ ಮೇಲೆ ದಾಳಿನಡೆಸಿ ನಮ್ಮ ರಾಷ್ಟ್ರವನ್ನು ಧ್ವಂಸಮಾಡುವವರಿಗೂ ಅವರನ್ನು ಸಮರ್ಥಿಸಿಕೊಳ್ಳಲು ನಾವು ಅವಕಾಶ ನೀಡುತ್ತೇವೆ ಎಂಬುದನ್ನು ವಿಶ್ವದ ಮುಂದೆ ಸಾಬೀತುಪಡಿಸಲು ಇದನ್ನೆಲ್ಲ ಮಾಡಲಾಗುತ್ತಿದೆ" ಎಂದು ಅವರು ವಿಶ್ಲೇಷಿಸಿದ್ದಾರೆ.
ಜೀನ್ಸ್, ಟೀಶರ್ಟ್ ಮತ್ತು ಸುಗಂಧ ದ್ರವ್ಯಗಳನ್ನು ಸಿಂಪಡಿಸಿ ನ್ಯಾಯಾಲಯಕ್ಕೆ ಹಾಜರಾಗಿರುವ ಕಸಬ್‌ನ ಬೇಕುಬೇಡಗಳ ಕುರಿತು ಸರ್ಕಾರವು ಕಾಳಜಿ ವಹಿಸುತ್ತಿದ್ದು, ಆತ ದರಿದ್ರ ಪಾಕಿಸ್ತಾನಕ್ಕಿಂತ ಭಾರತೀಯ ಜೈಲಿನ ಜೀವನವನ್ನೇ ಪ್ರೀತಿಸಲು ಆರಂಭಿಸಿದಂತೆ ತೋರುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಸರ್ಕಾರವು ಎಸ್.ಜಿ ಅಬ್ಬಾಸ್ ಕಾಜ್ಮಿಯನ್ನು ನೇಮಿಸಿದ ಬಳಿಕ, 'ಕಸಬ್ ಸಾಹೇಬರಿಗೆ' ತನಗಿನ್ನೂ 18 ವರ್ಷ ತುಂಬಿಲ್ಲ ಮತ್ತು ದಾಳಿಯ ಹಿಂದಿನ ಪ್ರೇರಣೆ ಜಮ್ಮು ಕಾಶ್ಮೀರವನ್ನು ವಶಪಡಿಸಿಕೊಳ್ಳುವುದು ಎಂಬುದು ಇದ್ದಕ್ಕಿದ್ದಂತೆ ನೆನಪಾಯಿತು ಎಂದು ಅವರು ಟೀಕಿಸಿದ್ದಾರೆ.
"ಈ ರೀತಿಯಾಗಿ ಪ್ರಕರಣದ ವಿಚಾರಣೆಯು ಕೆಳನ್ಯಾಯಾಲಯದಿಂದ ಮೇಲಿನ ನ್ಯಾಯಲಯಗಳಿಗೆ ತೆರಳುತ್ತದೆ ಮತ್ತು ಅಫ್ಜಲ್ ಗುರು ಪ್ರಕರಣದಂತೆ ಕೊನೆಗೆ ರಾಷ್ಟ್ರಪತಿಗಳ ಕ್ಷಮಾಪಣೆಗೆ ಬಂದು ನಿಲ್ಲುತ್ತದೆ" ಎಂದು ಅವರು ತಮ್ಮ ಸಂಪಾದಕೀಯದಲ್ಲಿ ಹೇಳಿದ್ದಾರೆ.
ಈ ವಿಚಾರಣೆಯನ್ನು ಹದಿನೈದು ದಿವಸದಿಂದ ತಿಂಗಳೊಳಗಾಗಿ ಮುಗಿಸಬೇಕು ಮತ್ತು ಆತ ಯಾವುದೇ ಮೇಲ್ಮನವಿ ಸಲ್ಲಿಸಲು ಅವಕಾಶವಾಗದಂತಹ ಶಿಕ್ಷೆಯನ್ನು ಆತನಿಗೆ ನೀಡಬೇಕು ಎಂದು ಅವರು ಪುನರುಚ್ಚರಿಸಿದ್ದಾರೆ.
ಕಸಬ್‌ನನ್ನು ಯಾವುದೇ ವಿಚಾರಣೆ ಇಲ್ಲದೆ, ಗೇಟ್ ವೇ ಆಫ್ ಇಂಡಿಯಾಬಳಿ ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂದು ಬಾಳಾಠಾಕ್ರೆ ಈ ಹಿಂದೆ ಹೇಳಿದ್ದರು. |