ರಾಜೀವಗಾಂಧಿ ಹತ್ಯಾ ಆರೋಪ ಎದುರಿಸುತ್ತಿರುವ ಎಲ್ಟಿಟಿಇ ಮುಖ್ಯಸ್ಥ ವಿ.ಪ್ರಭಾರಕರನ್ ಒಬ್ಬ ಉಗ್ರನೆಂದು ತನಗನಿಸುವುದಿಲ್ಲ ಆತ ತನ್ನ ಸ್ನೇಹಿತ ಎಂದು ಹೇಳಿರುವ ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ಬಗ್ಗೆ ಏನೊಂದು ಹೇಳದೆ ಮೌನ ವಹಿಸಿರುವ ಸೋನಿಯಾ ಕ್ರಮವನ್ನು ಎಐಎಡಿಎಂಕೆ ಮುಖ್ಯಸ್ಥೆ ಜಯಲಲಿತಾ ತೀವ್ರವಾಗಿ ಟೀಕಿಸಿದ್ದಾರೆ.
"ಸೋನಿಯಾ ಯಾಕೆ ಮೌನ ವಹಿಸಿದ್ದಾರೆ. ಅವರು ಕಾಂಗ್ರೆಸ್ ಅಧ್ಯಕ್ಷೆಯಲ್ಲವೇ? ಅವರು ರಾಜೀವ್ ಗಾಂಧಿಯವರ ವಿಧವೆಯಲ್ಲವೇ? ಅವರು ಯುಪಿಎ ಅಧ್ಯಕ್ಷೆಯಲ್ಲವೇ?" ಎಂಬುದಾಗಿ ಅವರು ಟಿವಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.
"ಆಕೆ ಸ್ಪಷ್ಟ ಉತ್ತರ ನೀಡಬೇಕು. ಇದರ ಕುರಿತು ಅವರ ಅಭಿಪ್ರಾಯ ಏನು ಎಂಬುದನ್ನು ತಿಳಿಸಬೇಕು ಮತ್ತು ಈ ಕುರಿತು ಅವರ ಉದ್ದೇಶವೇನು ಎಂಬುದನ್ನು ಅವರು ರಾಷ್ಟ್ರಕ್ಕೆ ತಿಳಿಸಬೇಕು" ಎಂದು ಜಯಲಲಿತಾ ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ಗೆ ಮುಜುಗರ ಹುಟ್ಟಿಸಬೇಕು ಮತ್ತು ಯುಪಿಎಯ ಉನ್ನತ ನಾಯಕರಲ್ಲಿ ಗೊಂದಲ ಹುಟ್ಟಿಸಬೇಕು ಎಂಬ ಉದ್ದೇಶದಿಂದ ಜಯಲಲಿತಾ ಈ ವಿವಾದದಲ್ಲಿ ಮಧ್ಯಪ್ರವೇಶಿಸಿರುವಂತೆ ತೋರುತ್ತದೆ. ಡಿಎಂಕೆಯೊಂದಿಗಿನ ಮೈತ್ರಿಗಾಗಿ ಕಾಂಗ್ರೆಸ್ ಬಲುದೊಡ್ಡ ಬೆಲೆ ತೆರಬೇಕಾಗುತ್ತದೆ ಎಂಬುದಾಗಿ ಜಯಲಲಿತಾ ಈಗಾಗಲೇ ಕಾಂಗ್ರೆಸ್‌ಗೆ ಎಚ್ಚರಿಸಿದ್ದರು.
ತಮಿಳರ ಪರಿಸ್ಥಿತಿ ಕುರಿತು ಡಿಎಂಕೆಯ ಮೌನದ ಕುರಿತು ಆಡಳಿತ ಪಕ್ಷಕ್ಕೆ ಇರಿಸುಮುರಿಸುಂಟುಮಾಡಲು ಜಯಲಲಿತಾ ವಾಗ್ದಾಳಿ ನಡೆಸುತ್ತಿದ್ದಾರೆ.
ಜಯಲಲಿತಾ ಹೇಳಿಕೆಗಳಿಗೆ ವಾಗ್ಯುದ್ಧ ನಡೆಸಲು ಕಾಂಗ್ರೆಸ್ ಮುಂದಾಗಿಲ್ಲ. ಆದರೆ ಜಯಲಲಿತಾ 'ವಿಧವೆ' ಎಂಬ ಶಬ್ದವನ್ನು ಬಳಸಿರುವುದು ಅತ್ಯಂತ ಕೀಳುಮಟ್ಟದ್ದಾಗಿದೆ ಎಂದು ಕಾಂಗ್ರೆಸ್ ವಕ್ತಾರ ಅಭಿಶೇಕ್ ಸಿಂಘ್ವಿ ಹೇಳಿದ್ದಾರೆ. ಜಯಲಲಿತಾ ರಾಜೀವ್ ಹತ್ಯೆಯಂತ ಸೂಕ್ಷ್ಮವಿಚಾರವನ್ನು ಎತ್ತಿಕೊಂಡಿರುವುದು ಜಯಲಲಿತಾ ಚುನಾವಣೆ ಬಳಿಕ ಕಾಂಗ್ರೆಸ್ ಜತೆಗೆ ಮೈತ್ರಿಯನ್ನು ಬಯಸುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಕರುಣಾನಿಧಿ ಹೇಳಿಕೆಗೆ ಸೋನಿಯಾ ಅವರೇ ಉತ್ತರಿಸಬೇಕು ಎಂಬ ಜಯಲಲಿತಾ ವಾದವನ್ನು ತಳ್ಳಿಹಾಕಿರುವ ಸಿಂಘ್ವಿ, ಕಾಂಗ್ರೆಸ್ ಎಐಎಡಿಎಂಕೆಯಂತೆ ಏಕವ್ಯಕ್ತಿ ಸಂಸ್ಥೆಯಲ್ಲ. ಪಕ್ಷದ ವಕ್ತಾರರ ಹೇಳಿಕೆಗಳು ಸಾಕಾಗುತ್ತದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ತನ್ನ ಹೇಳಿಕೆಗಳನ್ನು ತಿರುಚಲಾಗಿದೆ ಎನ್ನುವ ಮೂಲಕ, ತನ್ನ ನಿಲುವನ್ನು ಸ್ಪಷ್ಟಪಡಿಸಲು ಕರುಣಾನಿಧಿ ಪ್ರಯತ್ನಿಸಿದ ಬಳಿಕ ಜಯಲಲಿತಾರ ಈ ಹೇಳಿಕೆ ಹೊರಬಿದ್ದಿದೆ. "ಪ್ರಭಾಕರನ್ ಅವರು ಒಂದು ಸ್ವಾತಂತ್ರ್ಯ ಹೋರಾಟವಾಗಿ ಈ ಚಳುವಳಿ ಆರಂಭಿಸಿದ್ದರು, ಆದರೆ ಅವರಲ್ಲಿ ಹೆಚ್ಚಿನವರು ಉಗ್ರರಾಗಿ ಪರಿವರ್ತನೆ ಗೊಂಡರು" ಎಂಬುದಾಗಿ ತಾನು ಹೇಳಿದ್ದೆ ಎಂಬುದಾಗಿ ಸ್ಪಷ್ಟೀಕರಣ ನೀಡಲು ಕರುಣಾನಿಧಿ ಪ್ರಯತ್ನಿಸಿದ್ದರು. |